ಕೇಂದ್ರ ಸರ್ಕಾರ ಸಹಕರಿಸಿದರೆ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ

1ರಾಜ್ಯದಲ್ಲಿ ರೈತರ ಸಾಲ 52 ಸಾವಿರ ಕೋಟಿ ರೂ. ಗಳಷ್ಟಿದ್ದು, ಅದರಲ್ಲಿ 42 ಸಾವಿರ ಕೋಟಿ ರೂ. ಗಳಷ್ಟು ಸಾಲ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳದ್ದು. ಕೇಂದ್ರ ಸರ್ಕಾರ ಸಹಕರಿಸಿದಲ್ಲಿ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

2ಮುಖ್ಯಮಂತ್ರಿಗಳು ತಮ್ಮ ನೇತೃತ್ವದ ಸರ್ಕಾರ ನಾಲ್ಕು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸೌಲಭ್ಯ ವಿತರಣೆಯೇ ಸಂಭ್ರಮ- ಜನರಿಗೆ ಮನನ- ಜನರಿಗೆ ನಮನ ಎಂಬ ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗದ 9 ಜಿಲ್ಲೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.

6ರಾಜ್ಯ ಸರ್ಕಾರ ಬರಗಾಲವನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದೆ. ಉದ್ಯೋಗ, ಕುಡಿಯುವ ನೀರು, ದನಗಳಿಗೆ ಮೇವು ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇಂತಹ ಭೀಕರ ಬರಗಾಲದಲ್ಲಿಯೂ ಜನರು ಗುಳೆ ಹೋಗುವುದು ಕಡಿಮೆಯಾಗಲು ಅನ್ನಭಾಗ್ಯ ಕಾರಣ ಎಂದು ಅವರು ಪ್ರತಿಪಾದಿಸಿದರು.

8ಚಿತ್ರದುರ್ಗದಲ್ಲಿ ಅತ್ಯಂತ ಭೀಕರ ಬರಗಾಲವಿದೆ. ಈ ವರ್ಷದ ಡಿಸೆಂಬರ್ ಒಳಗೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ, ಜಿಲ್ಲೆಗೆ ನೀಡು ಕೊಡುತ್ತೇವೆ. ಇದಕ್ಕಾಗಿ ಆಯ ವ್ಯಯದಲ್ಲಿ ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಅಂತೆಯೇ ಎತ್ತಿನ ಹೊಳೆ ಮೂಲಕ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದು ಆದ್ಯ ಕರ್ತವ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

7ಕಳೆದ ನಾಲ್ಕು ವರ್ಷಗಳಲ್ಲಿ ಹಗರಣ ಮುಕ್ತ ಸರ್ಕಾರ ನಮ್ಮದು. ಪ್ರಜಾಪ್ರಭುತ್ವದ ದೊರೆಗಳು ಜನರು. ನಿಮಗೆ ಲೆಕ್ಕ ಒಪ್ಪಿಸುವುದು ನಮ್ಮ ಜವಾಬ್ದಾರಿ ಎಂದ ಮುಖ್ಯಮಂತ್ರಿಗಳು ಸಮ ಸಮಾಜದ ಕಲ್ಪನೆಯಲ್ಲಿ ನಂಬಿಕೆ ಇರುವ ಸರ್ಕಾರ ನಮ್ಮದು. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ 11 ಲಕ್ಷ ಮನೆ ನಿರ್ಮಿಸಿದ್ದೇವೆ. ಇನ್ನೊಂದು ವರ್ಷದಲ್ಲಿ 10 ಲಕ್ಷ ಮನೆ ಕಟ್ಟುತ್ತೇವೆ. ಕೌಶಲ್ಯ ಅಭಿವೃದ್ಧಿ ಮೂಲಕ 5 ಲಕ್ಷ ಯುವಕರಿಗೆ ಉದ್ಯೋಗ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು, ಕೆ ಎಸ್ ಆರ್ ಟಿ ಸಿ ವಿಭಾಗೀಯ ಕಚೇರಿ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ