ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕ : ಸಚಿವ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ದೈನಂದಿನ ಅಗತ್ಯತೆಗೆ ಬೇಕಿರುವ ವಿದ್ಯುತ್ ನ ಪ್ರಮಾಣವನ್ನಾಧರಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಸರ್ಕಾರವು ವಿದ್ಯುತ್ ಪೂರೈಕೆ ಅವಧಿಯನ್ನು ಘೋಷಿಸಿರುತ್ತದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಸಭೆ ಅಧಿವೇಶನದಲ್ಲಿ ತಿಳಿಸಿದರು.

ನಗರ/ಪಟ್ಟಣಗಳಲ್ಲಿ 22-24 ಗಂಟೆ, ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ವಿದ್ಯುತ್ 7 ಗಂಟೆಗಳ ಕಾಲ ಬ್ಯಾಚ್‍ಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ವರೆಗೆ 10 ಗಂಟೆಗಳ ಸಿಂಗಲ್ ಫೇಸ್ ವಿದ್ಯುತ್ತನ್ನು ಪೂರೈಸಲಾಗುತ್ತಿದೆ. ಉದ್ಯುತ್ ಘಟಕಗಳು ಸ್ಥಗಿತವಾದಾಗ ಮಾರ್ಗಗಳ ಅಡಚಣೆಯಿಂದ ಕೆಲವೊಮ್ಮೆ ವ್ಯತ್ಯಯ ಉಂಟಾಗುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಶಾಲಾ-ಕಾಲೇಜುಗಳ ಪರೀಕ್ಷೆಗಳು ಪ್ರಾರಂಭವಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಸಮರ್ಪಕ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ. ಮೂರು ವರ್ಷಗಳಿಂದ ಸತತ ಬರಗಾಲವಿದ್ದ ಕಾರಣ ವಿದ್ಯುತ್ ಉತ್ಪಾದನೆ ಲಭ್ಯತೆ ಕಡಿಮೆ ಇದ್ದು, ಬೇಡಿಕೆಯನ್ನಾಧರಿಸಿ ವಿದ್ಯುತ್ ಖರೀದಿಯಿಂದ ಸರಿದೂಗಿಸಲಾಗುತ್ತಿದೆ. ದೀರ್ಘಾವಧಿ ಆಧಾರದಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಷನ್ ರವರಿಂದ 450 ಮೆ.ವ್ಯಾ. ಮಹಾರಾಷ್ಟ್ರ ರಾಜ್ಯದಿಂದ ಮೇ 2017 ರವರೆಗೆ 300 ವೆ.ವ್ಯಾ. ಮೇ 2017 ರವರೆಗೆ ಮೆ: ಪಿಟಿಸಿ ಇಂಡಿಯಾ ಲಿ. ಮತ್ತು ಮೆ: ಜೆಎಸ್‍ಡಬ್ಲಿಯು ಎನರ್ಜಿ ಲಿ. ಅವರಿಂದ 900 ಮೆ. ವ್ಯಾ. ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದಲೂ ಸಹ ಕೆ. ಇ. ಆರ್. ಸಿ. ನಿಗದಿಪಡಿಸಿದ ಜಕಾತಿ ಆಧಾರದಲ್ಲಿ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.


ನಿಮ್ಮ ಟಿಪ್ಪಣಿ ಬರೆಯಿರಿ