ಗೌರಿ ಲಂಕೇಶ್ ಹತ್ಯೆ ತನಿಖೆಗೆ ವಿಶೇಷ ತಂಡ:ಸಿಎಂ

CM Siddu.pngಹೆಸರಾಂತ ಚಿಂತಕಿ, ಸುಪ್ರಸಿದ್ಧ ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಗೆ ಆರಕ್ಷಕ ಮಹಾ ನಿರೀಕ್ಷಕ ( ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ) ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಆರಕ್ಷಕ ಮಹಾ ನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ರೂಪಕ್ ಕುಮಾರ್ ದತ್ತ ಅವರಿಗೆ ಇಲ್ಲಿ ಇಂದು ಸೂಚಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸೌಧದ ತಮ್ಮ ಕೊಠಡಿಯಲ್ಲಿ ಗೃಹ ಸಚಿವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಅವರು ತುರ್ತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಈ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆದಕಾರಣ, ಸಿ ಐ ಡಿ ತನಿಖೆಯ ಬದಲು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲು ಆದೇಶಿಸಲಾಗಿದೆ. ವಿಶೇಷ ತನಿಖಾ ತಂಡದ ಮುಖ್ಯಸ್ಥರ ಆಯ್ಕೆಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಸಮಾಲೋಚಿಸಿ ರಾಜ್ಯ ಆರಕ್ಷಕ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕರು ಅಂತಿಮಗೊಳಿಸುತ್ತಾರೆ. ತನಿಖೆಯ ತೀವ್ರತೆಗೆ ಅನುವಾಗುವಂತೆ ತಂಡಕ್ಕೆ ಯಾವ ಅಧಿಕಾರಿ ಬೇಕು. ಎಷ್ಟು ಅಧಿಕಾರಿಗಳು ಬೇಕು ಎಷ್ಟು ಮಂದಿಯ ಅವಶ್ಯಕತೆ ಇದೆಯೋ ಅಷ್ಟೂ ಮಂದಿಯನ್ನು ಆಯ್ಕೆ ಮಾಡಿ ಕೊಳ್ಳುವ ಸ್ವಾತಂತ್ರ್ಯವನ್ನು ತಂಡದ ಮುಖ್ಯಸ್ಥರಿಗೆ ನೀಡಲಾಗಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕೇಂದ್ರ ತನಿಖಾ ದಳ ( ಸಿ ಬಿ ಐ ) ಕ್ಕೆ ವಹಿಸುವಂತೆ ಅವರ ಸಹೋದರ ಇಂದ್ರಜಿತ್ ಲಂಕೇಶ್ ಅವರು ಒತ್ತಾಯಿಸಿದ್ದಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಯವರ ಪ್ರತಿಕ್ರಿಯೆ ಬಯಸಿದಾಗ ಈ ಪ್ರಕರಣವನ್ನು ಸಿ ಬಿ ಐ ಗೆ ವಹಿಸಲು ರಾಜ್ಯ ಸರ್ಕಾರದ ಅಭ್ಯಂತರವೇನಿಲ್ಲ. ಸಿ ಬಿ ಐ ತನಿಖೆಗೆ ಅವರ ಕುಟುಂಬಸ್ಥರು ಬೇಡಿಕೆ ಇಟ್ಟಲ್ಲಿ, ಕುಟುಂಬಸ್ಥರ ಮನವಿಯನ್ನು ನಮ್ಮ ಸರ್ಕಾರ ತೆರೆದ ಮನಸ್ಸಿನಿಂದ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಸಿ ಸಿ ಟಿ ವಿ ಯಲ್ಲಿ ಅಂತಿಮ ಕ್ಷಣಗಳು:

ಗೌರಿ ಲಂಕೇಶ್ ಅವರ ಮನೆಯ ಸುತ್ತ-ಮುತ್ತ ಅಳವಡಿಸಿದ್ದ ನಾಲ್ಕು ಕ್ಲೋಸ್ ಸಕ್ರ್ಯೂಟ್ ಟೆಲೆವಿಷನ್ ( ಸಿ ಸಿ ಟಿ ವಿ ) ಕ್ಯಾಮರಾಗಳಲ್ಲಿ ದಾಖಲಾಗಿದ್ದ ಚಿತ್ರಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಗೌರಿ ಲಂಕೇಶ್ ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಮಂಗಳವಾರ ರಾತ್ರಿ ಬಂದಾಗ, ಶಿರಸ್ತ್ರಾಣಧಾರಿ (ಹೆಲ್ಮೆಟ್ ಧರಿಸಿದ್ದ) ವ್ಯಕ್ತಿಯೊಬ್ಬ ಬಿಂದು ಶೂನ್ಯ ವಲಯ ( ಪಾಯಿಂಟ್ ಬ್ಲ್ಯಾಂಕ್ ರೇಂಜ್) ದಿಂದ ಗುಂಡಿನ ಮಳೆಗೆರೆಯುವುದು ಮನೆಯ ಬಾಗಿಲ ಬಳಿ ಅಳವಡಿಸಿರುವ ಸಿ ಸಿ ಟಿ ವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ತಮ್ಮ ದೇಹಕ್ಕೆ ಗುಂಡು ಬಿದ್ದ ನಂತವೂ ಗೌರಿ ಲಂಕೇಶ್ ಅವರು ಮನೆಯ ಬಾಗಿಲತ್ತ ನಾಲ್ಕೈದು ಹೆಜ್ಜೆ ಹಾಕಿ, ನಂತರ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೊನೆಯುಸಿರೆಳೆದಿದ್ದಾರೆ.

ಇದು ಆಕೆಯ ಅಂತಿಮ ಕ್ಷಣಗಳು. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವುದು ಒಬ್ಬ ಹಂತಕನೇ ? ಹಂತಕರ ಸಂಖ್ಯೆ ಎಷ್ಟು ? ಹತ್ಯೆಗೆ ಮುನ್ನ ಆಗಮಿಸಿದ ವಾಹನ ಅಥವಾ ವಾಹನಗಳ ವಿವರ ತಿಳಿದು ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ನನಗೂ ದಿಗ್ಬ್ರಮೆ:

ಗೌರಿ ಲಂಕೇಶ್ ಅವರ ಹತ್ಯೆ ಎಡಪಂಥೀಯ ಚಳುವಳಿಗಳಿಗೆ ಭರಿಸಲಾಗದ ನಷ್ಟವನ್ನು ಉಂಟು ಮಾಡಿದೆ. ಇದೊಂದು ವ್ಯವಸ್ಥಿತ ಸಂಚು. ಈ ಷಡ್ಯಂತ್ರವನ್ನು ಯಾರು ರೂಪಿಸಿದ್ದಾರೆ ? ಎಲ್ಲಿ ರೂಪಿಸಿದ್ದಾರೆ ? ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲಾಗದು.

ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ ನನ್ನಲ್ಲೂ ದಿಗ್ಭ್ರಮೆ ಮೂಡಿಸಿದೆ. ಆಕೆ ನನಗೂ ಆಪ್ತಳಾಗಿದ್ದವಳು. ಆಕೆಯ ತಂದೆ ಪಿ. ಲಂಕೇಶ್ ಅವರ ಕಾಲದಿಂದಲೂ ಆಕೆ ನನಗೆ ಪರಿಚಿತಳು. ತಮ್ಮನ್ನು ಹಲವಾರು ಬಾರಿ ಭೇಟಿ ಮಾಡಿದ್ದರೂ, ಯಾವ ಸಂದರ್ಭದಲ್ಲೂ ಆಕೆ ತನಗೆ ಜೀವ ಬೆದರಿಕೆ ಇದೆ ಎಂಬ ವಿಷಯವನ್ನು ತಮ್ಮಲ್ಲಿ ಹಂಚಿಕೊಂಡಿರಲಿಲ್ಲ ಎಂಬ ಮಾಹಿತಿಯನ್ನು ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಹಂಚಿ ಕೊಂಡರು.

ಪ್ರಗತಿಪರ ಚಿಂತಕರಿಗೆ ಭದ್ರತೆ :

ಸಾಮಾಜಿಕ ಜಾಲ ತಾಣಗಳಲ್ಲಿನ ವಿಚಾರ ವಿನಿಮಯಗಳ ಮೇಲೆ ನಿಗಾ ಇರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿರುವ ಪ್ರಗತಿಪರ ಚಿಂತಕರನ್ನು ಗುರುತಿಸಿ, ಅವರೆಲ್ಲರಿಗೂ ಸೂಕ್ತ ಭದ್ರತೆಯನ್ನು ಒದಗಿಸುವಂತೆಯೂ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಪ್ರಕಟಿಸಿದರು.

ಸಾಮ್ಯತೆಯ ಬಗ್ಗೆ ಈಗಲೇ ಸ್ಪಷ್ಟತೆ ನೀಡಲು ಸಾಧ್ಯವಿಲ್ಲ:

ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿ ನರೇಂದ್ರ ಅಚ್ಯುತ್ ದಾಭೋಲ್ಕರ್, ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ, ಕರ್ನಾಟಕದ ಹೆಸರಾಂತ ಚಿಂತಕ, ವಿಚಾರವಾದಿ ಹಾಗೂ ಸಾಹಿತಿ ಡಾ ಎಂ ಎಂ ಕಲ್ಬುರ್ಗಿ ಹತ್ಯಾ ಪ್ರಕರಣಗಳಲ್ಲಿ ಬಳಕೆಯಾದ ಶಸ್ತ್ರವೂ ಸೇರಿದಂತೆ ಹತ್ಯೆಯ ಶೈಲಿಯಲ್ಲಿ ಕೆಲವು ಸಾಮ್ಯತೆಗಳಿವೆ. ಆದರೆ, ಆ ಪ್ರಕರಣಗಳಿಗೂ ಈ ಪ್ರಕರಣಗಳಿಗೂ ಸಾಮ್ಯತೆ ಇದೆಯೇ ? ಇಲ್ಲವೇ ? ಎಂಬ ಬಗ್ಗೆ ಸ್ಪಷ್ಟತೆ ನೀಡಲು ಈಗಲೇ ಸಾಧ್ಯವಿಲ್ಲ. ಈ ಪ್ರಕರಣದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂಬುದನ್ನು ನಾವು ಗಮನಿಸಬೇಕು ಎಂದು ಮುಖ್ಯಮಂತ್ರಿ ಸೂಚ್ಯವಾಗಿ ತಿಳಿಸಿದರು.

ದಾಭೋಲ್ಕರ್ ಹತ್ಯಾ ಪ್ರಕರಣವನ್ನು ಸಿ ಬಿ ಐ ತನಿಖೆ ನಡೆಸುತ್ತಿದೆ. ಪನ್ಸಾರೆ ಹತ್ಯಾ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ, ಡಾ ಎಂ ಎಂ ಕಲ್ಬುರ್ಗಿ ಹತ್ಯಾ ಪ್ರಕರಣವನ್ನು ಸಿ ಐ ಡಿ ತನಿಖೆ ನಡೆಸುತ್ತಿದೆ. ಈ ಮೂರೂ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ರಾಜ್ಯದ ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೆ,ದಾಭೋಲ್ಕರ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಬಿ ಐ ವಶಕ್ಕೆ ಪಡೆದಿರುವ ವ್ಯಕ್ತಿಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಪೊಲೀಸರೂ ಹಾಜರಿದ್ದರು ಎಂಬ ಅಂಶವನ್ನು ಸಿದ್ದರಾಮಯ್ಯ ಅವರು ಬಹಿರಂಗಪಡಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮ : ಡಾ ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯಾ ಪರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.

ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s