ಕೆರೆಗಳ ಪುನಶ್ಚೇತನಕ್ಕೆ ಜಿಲ್ಲಾಧಿಕಾರಿ ಸಾಥ್

ಸರ್ಕಾರಿ ಅಧಿಕಾರಿಗಳು ಅಂದ್ರೆ ಸಾಮಾನ್ಯ ಜನರಿಗೆ ಈಗಲೂ ಅಷ್ಟಕಷ್ಟೆ ಎಂಬಂತಿದೆ.  ಅದರಲ್ಲೂ ದೊಡ್ಡ ದೊಡ್ಡ ಅಧಿಕಾರಿಗಳನ್ನು ಕಂಡರಂತೂ ಶ್ರೀಸಾಮಾನ್ಯರ ಪ್ರತಿಕ್ರಿಯೆಯೇ ಬೇರೆ ಇರುತ್ತೆ. ಅವರಿಗೇನಪ್ಪಾ ಎಸಿ ಕಾರ್ ನಲ್ಲಿ ಓಡಾಡಿಕೊಂಡು ತಿಂಗಳಾಗ್ತಿದ್ದಂಗೆ ಪಗಾರ ಎಣಿಸ್ತಾರೆ, ನಮ್ಮಂಥಹವರ ಗೋಳು ಅವರಿಗೆಲ್ಲಿ ಮುಟ್ಟೀತು ಅನ್ನೋ ಅಭಿಪ್ರಾಯವಿರುತ್ತೆ. ಇತ್ತ ಸರ್ಕಾರದ ಪ್ರತಿನಿಧಿಗಳು ಸರ್ಕಾರದ ಎಲ್ಲಾ ಅಧಿಕಾರಿಗಳು ಜನಸಾಮಾನ್ಯರೊಟ್ಟಿಗೆ ಬೆರೆತು ಅವರ ವಿಶ್ವಾಸ ಗೆದ್ದು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹರಿಗೆ ತಲುಪಿಸುತ್ತಿಲ್ಲ ಅಂತಾರೆ.

ಆದ್ರೆ  ಈ ಭಾವನೆಗಳಿಗೆ ವಿರುದ್ಧವಾಗಿ ಹಾವೇರಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ನಾವೂ ಕೂಡಾ ನಿಮ್ಮಂತೆ ಮಣ್ಣಿನ ಮಕ್ಕಳೇ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿದ್ದಾರೆ. ಜಿಲ್ಲೆಯ ದೇವಿಹೊಸೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಕೆರೆಯಲ್ಲಿ ಹಳ್ಳಿಯ ಜನರೊಟ್ಟಿಗೆ ತಾವೂ ಕೈ ಜೋಡಿಸಿ ಕೆಲಸ ಮಾಡಿ ಎಲ್ಲರ ವಿಶ್ವಾಸ ಗೆದ್ದಿದ್ದಾರೆ. ಇತರ ಎಲ್ಲ ಅಧಿಕಾರಿಗಳಿಗೂ ಸ್ಫೂರ್ತಿದಾಯಕವಾದ ಈ ವರದಿಯ ವಿವರ ಇಲ್ಲಿದೆ.

ಭೂ ಸೇವೆಗೆ ನಿಂತ ಅಧಿಕಾರಿಗಳ ತಂಡ :

ದೇವಿಹೊಸೂರ ದೊಡ್ಡ ಕೆರೆಯಲ್ಲಿ ಅಧಿಕಾರಿಗಳ ತಂಡ ಶ್ರಮದಾನ ನಡೆಸಿದೆ. ಬರಗಾಲದಿಂದ ತತ್ತರಿಸಿದ ಜನತೆಗೆ ಉದ್ಯೋಗಾವಕಾಶಗಳ ಅರಿವು, ಸಾಕ್ಷರತೆ ಅಗತ್ಯತೆ, ಆರೋಗ್ಯದ ಮಹತ್ವದ ಜೊತೆಗೆ ಪಾರಂಪರಿಕ ಕೆರೆಗಳ ಪುನಶ್ಚೇತನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾಯಿತು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ನೇತೃತ್ವದ ಅಧಿಕಾರಿಗಳ ತಂಡ ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಕೆರೆ ಅಂಗಳದಲ್ಲಿ ಗುರುವಾರ ಶ್ರಮದಾನ ನಡೆಸಿತು.
ರೋಜಗಾರ್ ದಿವಸ್ ಕಾರ್ಯಕ್ರಮದ ಅಂಗವಾಗಿ ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿಕಾರರೊಂದಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ ಅವರ ನೇತೃತ್ವದಲ್ಲಿ ನೂರಾರು ಪುರುಷ ಹಾಗೂ ಮಹಿಳಾ ಅಧಿಕಾರಿಗಳು ಒಂದು ಗಂಟೆಕಾಲ ಶ್ರಮದಾನ ನಡೆಸಿ ಮಣ್ಣಿನ ಬುಟ್ಟಿಹೊತ್ತು ಟ್ರ್ಯಾಕ್ಟರ್ ತುಂಬಿಸುವುದು, ಗುದ್ದಲಿ ಹಿಡಿದು ಮಣ್ಣು ಅಗಿಯುವ ಕಾಯಕ ನಡೆಸಿದರು.

ಅಧಿಕಾರಿಗಳೊಂದಿಗೆ ಕೂಲಿಕಾರರು ಸಂಭ್ರಮದಿಂದ ಮಣ್ಣು ಅಗೆಯುವ ಕೆಲಸದಲ್ಲಿ ತೊಡಗಿದ್ದು ಕ್ಷಣಕಾಲ ಕೂಲಿಕಾರ, ಅಧಿಕಾರಿ ಎಂಬ ಬೇಧ ಮರೆತು ಎಲ್ಲರೂ ಸಮಾನರು ಎಂಬ ಚಿತ್ರಣ ಮೂಡಿಬಂದಿತು.
ಜಿಲ್ಲಾಧಿಕಾರಿ ಡಾ.ವೆಂಕಟೇಶ ಅವರು ಗುದ್ದಲಿ ಹಿಡಿದು ಮಣ್ಣಿನ ಹೆಂಟೆಯನ್ನು ಉರಿಳಿಸುತ್ತಾ ತಲೆಯ ಮೇಲೆ ಬುಟ್ಟಿಹೊತ್ತು ಟ್ರ್ಯಾಕ್ಟರ್‍ಗೆ ತುಂಬಿಸುವ ಕೆಲಸ ಮಾಡಿದರು.

ಇದಕ್ಕೆ ಕೈಜೋಡಿಸಿದ ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಕೆ.ಬಿ.ಅಂಜನಪ್ಪ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶ ಶಿವನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಾಳಗೇರ, ಜಿ.ಪಂ.ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ವಿವಿಧ ಇಲಾಖೆಯ ಮಹಿಳಾ ಅಧಿಕಾರಿಗಳಾದ ಸಹಾಯಕ ನಿರ್ದೇಶಕಿ ಭಾರತಿ ಶಿಗ್ಗಾಂವ, ಉದ್ಯೋಗ ಖಾತ್ರಿ ಪ್ರಚಾರ ಅಧಿಕಾರಿ ರಾಜೇಶ್ವರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜರಿನಾಬೇಗಂ, ಸವಿತಾ ಎರೆಶೀಮಿ, ಶಿಲ್ಪಾ ಒಳಗೊಂಡಂತೆ ಇತರ ಅಧಿಕಾರಿಗಳು ದೈನದಿಂದ ಕೆಲಸ ಮರೆತು ಕೆರೆಯಲ್ಲಿ ಮಣ್ಣು ತುಂಬುವ ಕೆಲಸದಲ್ಲಿ ತೊಡಗಿ ಸಾಮಾನ್ಯರಿಗೆ ಸ್ಫೂರ್ತಿ ತುಂಬುವ ಕೆಲಸಮಾಡಿದರು.

ಕಾರ್ಮಿಕರ ಸಮಸ್ಯೆಗೆ ಕಿವಿಯಾದ ಜಿಲ್ಲಾಧಿಕಾರಿ :

ಶ್ರಮದಾನಮಾಡುತ್ತಲೇ ಮಣ್ಣು ತುಂಬಿದ ಟ್ರ್ಯಾಕ್ಟರ್‍ನ್ನು ಚಾಲನೆಮಾಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಲ್ಲರ ಗಮನಸೆಳೆದರು. ಶ್ರಮದಾನದ ಜೊತೆಜೊತೆಗೆ ಕೂಲಿಕಾರ ಸಮಸ್ಯೆಗಳನ್ನು ಅರಿಯಲು ಅವರೊಂದಿಗೆ ಸಂವಾದ ನಡೆಸಿದರು. ಸರಿಯಾಗಿ ಕೂಲಿ ಹಣ ತಲುಪುತ್ತಿದೆಯಾ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಅಕ್ಷರ ಕಲಿಕೆ, ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆಯೇ, ಎಷ್ಟು ದಿನಕ್ಕೆ ನಿಮಗೆ ಪಗಾರ ಬಂದರೆ ಅನುಕೂಲವಾಗುತ್ತದೆ ಎಂದು ಮಾಹಿತಿ ಪಡೆದಿದ್ದಲ್ಲದೆ ಗ್ರಾಮದ ಸಮಸ್ಯೆಗಳನ್ನು ಕೂಲಿಕಾರರಿಂದ ಕೇಳಿ ತಿಳಿದುಕೊಂಡರು.

ತಮ್ಮ ಸಮಸ್ಯೆ ಆಲಿಸಲು ಮುಂದಾದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲು ಮಹಿಳಾ ಕೂಲಿಕಾರರು ಗಂಡಂದಿರ ಕುಡಿತದ ಹವ್ಯಾಸದಿಂದ ಸಂಸಾರ ಹಾಳಾಗುತ್ತಿದ್ದು, ಇದನ್ನು ತಡೆಯುವಂತೆ ಒಕ್ಕೊರಲಿನಿಂದ ಮನವಿಮಾಡಿಕೊಂಡರು. ಕೆಲಸ ನೀಡುವಲ್ಲಿ ಸಮಸ್ಯೆ ಇಲ್ಲ, ಆದರೆ ಏಳುದಿನಕ್ಕೊಮ್ಮೆ ಕೂಲಿ ರೊಕ್ಕಬಂದರೆ ಒಳಿತು ಎಂದು ಕೆಲ ಕೂಲಿಕಾರರು ಮನವಿ ಮಾಡಿಕೊಂಡರು. ಕೂಲಿ ಹಣ ಜಮಾ ಕುರಿತಂತೆ ಬ್ಯಾಂಕಿಗೆ ಹೋದರೆ ನಮಗೆ ಬ್ಯಾಂಕಿನವರು ಕಿಮ್ಮತ್ತು ನೀಡುವುದಿಲ್ಲ. ಅವರಿಗೆ ಬುದ್ದಿಮಾತು ಹೇಳಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಹತ್ತು ದಿನಗಳೊಳಗೆ ಕೂಲಿ ಸಿಗುವಂತೆ ಭರವಸೆ :

ಈ ಸಂದರ್ಭದಲ್ಲಿ ಕೂಲಿಕಾರರನ್ನು ಸಮಾಧಾನಪಡಿಸುತ್ತ ತಕ್ಷಣವೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು. ಏಳರಿಂದ ಹತ್ತು ದಿನದೊಳಗಾಗಿ ಕೂಲಿ ಹಣ ಪಾವತಿಯಾಗುವಂತೆ ಕ್ರಮ ತೆಗೆದುಕೊಳ್ಳಿ ಎಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜ್ಯೋತಿ ಕಮ್ಮಾರ ಅವರಿಗೆ ಸೂಚನೆ ನೀಡಿದರು. ಗ್ರಾಮದ ನಿರಂತರ ಜ್ಯೋತಿ ಬೆಳಕಿನ ವ್ಯವಸ್ಥೆ ಕುರಿತಂತೆ ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಎರಡು ತಿಂಗಳೊಳಗಾಗಿ ನಿರಂತರ ಜ್ಯೋತಿ ವಿದ್ಯುತ್ ಬರುತ್ತದೆ. ಸಮಸ್ಯೆ ಬಗೆಹರಿಯದಿದ್ದರೆ ನನ್ನ ಗಮನಕ್ಕೆ ತನ್ನಿ. ಆದರೆ ಕೂಲಿಯ ಜೊತೆಗೆ ನಿಮ್ಮ ಊರಿಗೆ ಅನುಕೂಲವಾಗುವ ಕೆರೆ ಹೂಳೆತ್ತುವ ಕಾಮಗಾರಿಗಳನ್ನು, ಅಂತರ್ಜಲ ಹೆಚ್ಚಳ ಮಾಡುವ ಕಾಮಗಾರಿಗಳನ್ನು, ಸಸಿನೆಡುವ ಕಾರ್ಯವನ್ನು ಕಾಳಜಿಯಿಂದ ಮಾಡಿ. ಇದರಿಂದ ಪದೆ ಪದೆ ಬರ ಪರಸ್ಥಿತಿ ಎದುರಿಸುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು.

ಗುಳೆ ಹೋಗಬೇಡಿ :
ಬ್ಯಾಂಕಿನ ವ್ಯವಹಾರ ಕಲಿಯಲು ಅಕ್ಷರ ಕಲಿಯಿರಿ. ಬ್ಯಾಂಕ್ ವ್ಯವಹಾರ ಹಾಗೂ ಎ.ಟಿ.ಎಂ. ಬಳಕೆ ಕುರಿತಂತೆ ಉದ್ಯೋಗಖಾತ್ರ ಕೂಲಿಕಾರರಿಗೆ ತರಬೇತಿ ನೀಡಿ ಎಂದು ಸಾಕ್ಷರತಾ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಉದ್ಯೋಗ ನೀಡಿಕೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕುರಿತಂತೆ ಕೂಲಿಕಾರರಿಂದ ಮಾಹಿತಿ ಪಡೆದು ನಿಮಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಉದ್ಯೋಗ ಅರಸಿ ಬೇರೆ ಕಡೆ ಗುಳೆ ಹೋಗುವುದು ಅಗತ್ಯವಿಲ್ಲ. ನೀವು ವಾಸಿಸುವ ಊರಲ್ಲೇ ಕೆಲಸ ನೀಡಲಾಗುವುದು. ಯಾವುದೇ ಸಂದರ್ಭದಲ್ಲಿ ನೀವು ಕೆಲಸ ಬೇಡಿ ಬಂದರೆ ದುಡಿಯಲು ಕೆಲಸ ನೀಡುವುದಾಗಿ ಭರವಸೆ ನೀಡಿದರು.

ಉದ್ಯೋಗಖಾತ್ರಿ ಕೂಲಿನಿರತ ಮಹಿಳೆಯರಾದ ಸರೋಜಮ್ಮ ಸುಣಗಾರ, ಬೀಬಿಜಾನ್ ಮಾತನಾಡಿ, ನಾವು ಬಡವರು ಉದ್ಯೋಗಖಾತ್ರಿ ಕೆಲಸ ಸಿಗದಿದ್ದರೆ ದೂರದ ಗೋವಾ, ಮುಂಬೈ, ಬೆಂಗಳೂರಿಗೆ ಗುಳೆಹೋಗಿ ದುಡಿಯಬೇಕಾಗಿತ್ತು. ಈಗ ನಾವು ಬೇಡಿದಷ್ಟು ಕೆಲಸ ಇಲ್ಲೆ ಸಿಗುತ್ತಿದೆ ಬೆಳಿಗ್ಗೆ 5 ರಿಂದ 11 ಗಂಟೆವರೆಗೆ ಕೆಲಸ ಮಾಡಿದರೆ ದಿನವೊಂದಕ್ಕೆ ರೂ.350 ರಿಂದ ರೂ.400 ದುಡಿಯುತ್ತೇವೆ. ಖಾಸಗಿ ಕೆಲಸಕ್ಕೆ ಹೋಗಿದ್ದರೆ ದಿನಕ್ಕೆ ರೂ.150 ದೊರಕುತ್ತಿತ್ತು. ಈಗ ಇಲ್ಲಿಯೇ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದರೆ ಏಳು ದಿನಕ್ಕೆ ಕೂಲಿ ಹಣ ಬರಬೇಕು, ಬ್ಯಾಂಕಿನವರು ನಮಗೆ ಕಿಮ್ಮತ್ತು ನೀಡುವುದಿಲ್ಲ. ಬ್ಯಾಂಕಿನವರು ನಮ್ಮೊಂದಿಗೆ ಸಹನೆಯಿಂದ ನಡೆದುಕೊಳ್ಳುವಂತೆ ಆದರೆ ನಮಗೆ ಅನುಕೂಲವೆಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ಕೂಲಿಕಾರ ಬಾಬುಸಾಬ ಕುಂದೂರ ಎಂಬುವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡು ನಾವು ಅನಕ್ಷರಸ್ಥರು ಈಗ ತಾನೆ ಅಕ್ಷರ ಕಲಿಯಲು ಆರಂಭಿಸಿದ್ದೇವೆ. ನಮಗೆ ಪ್ರತಿದಿನ ಎಷ್ಟು ಕೆಲಸ ಮಾಡಿದ್ದೇವೆ, ಎಷ್ಟು ಪಗಾರ ಬರುತ್ತದೆ ಎಂಬುದನ್ನು ಪ್ರತಿದಿನ ಚೀಟಿ ಬರೆದು ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡರು.

ಕೂಲಿಕಾರರಾದ ನಿಂಗಪ್ಪ ಹೊಸೂರ, ಚನ್ನಪ್ಪ ಮಲ್ಲೂರ ಮಾತನಾಡಿ, ಉದ್ಯೋಗಖಾತ್ರಿ ಕೆಲಸದಿಂದ ನಾವು ನೆಮ್ಮದಿಯಾಗಿದ್ದೇವೆ. ಇಲ್ಲಾಂದ್ರೆ ಬರಗಾಲದ ಸಂದರ್ಭದಲ್ಲಿ ಬಾಳ ತ್ರಾಸ್ ಆಗುತ್ತಿತ್ತು. ಕೂಲಿಯ ಜೊತೆಗೆ ಅಕ್ಷರ ಕಲಿಕೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ನಮಗೆ ಅನುಕೂಲವಾಗಿದೆ ಎಂದು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s