ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿಮಗೆಷ್ಟು ಗೊತ್ತು…?

ಕೇಂದ್ರ ಸರ್ಕಾರವು 2009-10 ರಲ್ಲಿ ವಿವಿಧ ಯೋಜನೆಗಳಾದ ಬಾಲನ್ಯಾಯ ಕಾಯ್ದೆಯ ಅನುಷ್ಠಾನ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆದ ತಂಗುದಾಣಗಳು, ದತ್ತು ಕಾರ್ಯಕ್ರಮ ಮತ್ತು ಮಕ್ಕಳ ಸಹಾಯವಾಣಿ ಸೇವೆಗಳ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿ ನೂತನವಾದ ಕೇಂದ್ರ ಪುರಸ್ಕೃತ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ರೂಪಿಸಿತು. ಈ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲೂ ಸಹ ಜಾರಿಗೆ ತರಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸದರಿ IPS ಯೋಜನೆಯ ಅನುಷ್ಟಾನದ ಬಗ್ಗೆ OU ಸಹಿಯಾಗಿರುತ್ತದೆ. ಕರ್ನಾಟಕ ಸಂಘ ನೋಂದಣಿ ಕಾಯಿದೆ 1960ರ ಅನ್ವಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯನ್ನು ದಿನಾಂಕ: 5-2-2011ರಂದು ನೋಂದಣಿ ಮಾಡಲಾಗಿದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಬಾಲನ್ಯಾಯ ಕಾಯ್ದೆಯ ಅನುಷ್ಠಾನ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು, ದತ್ತು ಕಾರ್ಯಕ್ರಮ, ಮಕ್ಕಳ ಸಹಾಯವಾಣಿ, ಪ್ರಾಯೋಜಕತ್ವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸೊಸೈಟಿಯು ಈ ಕೆಳಕಂಡ ಸಾಮಾಜಿಕ ಕಾಯಿದೆಗಳನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

1. ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ)ಕಾಯ್ದೆ, 2015.

2. ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕರ್ನಾಟಕ ನಿಯಮಗಳು 2016.

3. ಹಿಂದೂ ದತ್ತಕ ಮತ್ತು ನಿರ್ವಹಣೆ ಕಾಯ್ದೆ 1956

4. ಪೋಷಕತ್ವ ಮತ್ತು  ವಾಡ್ರ್ಸ್ ಕಾಯ್ದೆ, 1860

5. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ, 2012

 

ಉದ್ದೇಶ:

ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯು ನಿರ್ಲಕ್ಷತೆಗೊಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ ಒಳಗಾದ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಠದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿರುತ್ತದೆ.

ಆದ್ಯತಾ ಗುಂಪು:

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ಮಕ್ಕಳಿಗೆ ಮತ್ತು ಕಾನೂನಿನ ಸಂಪರ್ಕಕ್ಕೆ ಬರುವ ಮಕ್ಕಳು ಅಂದರೆ ಆಪಾದಿತ ಅಥವಾ ಸಾಕ್ಷಿದಾರ ಅಥವಾ ಇತರೆ ಯಾವುದೇ ರೀತಿಯ ಪರಿಸ್ಥಿತಿಯುಳ್ಳ ಮಕ್ಕಳಿಗೆ ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳಲ್ಲಿ ಗಮನ ನೀಡುತ್ತದೆ.

ಈ ಯೋಜನೆಯು ದುರ್ಬಲ ಮಕ್ಕಳಿಗೆ ಶಾಸನಬದ್ಧ, ನಿಯಂತ್ರಣಾತ್ಮಕ ಮತ್ತು ಪೋಷಣೆ ಮತ್ತು ಪುನರ್ವಸತಿ ಸೇವೆಗಳನ್ನು ನೀಡುವುದಲ್ಲದೆ ಸಂಭಾವ್ಯ ದುರ್ಬಲ ಕುಟುಂಬದ ಮತ್ತು ಅಪಾಯದಲ್ಲಿರುವ ಕುಟುಂಬ ಮತ್ತು ಸಾಮಾಜಿಕವಾಗಿ ಹೊರತುಪಡಿಸಿದ ಗುಂಪಿನ ಮಕ್ಕಳು ಅಂದರೆ ವಲಸೆ ಕುಟುಂಬಗಳು, ಬಡತನ ರೇಖೆಗಿಂತ ಕಡಿಮೆ ಜೀವನ ಮಟ್ಟದ ಕುಟುಂಬ, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಗಳು, ತಾರತಮ್ಯಕ್ಕೆ ಒಳಗಾದ ಕುಟುಂಬಗಳು, ಹೆಚ್‍ಐವಿ/ಏಡ್ಸ್ ಪೀಡಿತ ಮತ್ತು ಬಾಧಿತ ಮಕ್ಕಳು, ಬೀದಿ ಮಕ್ಕಳು, ಮಾದಕ ದ್ರವ್ಯ ಪೀಡಿತ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಅನೈತಿಕ ಸಾಗಾಣಿಕೆ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಅನಾಥ ಮಕ್ಕಳಿಗೆ ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳಲ್ಲಿ ಗಮನ ನೀಡುತ್ತದೆ.

ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯು ಈ ಕೆಳಕಂಡ ಸಾಮಾಜಿಕ  ಶಾಸನಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

1. ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ, 2015 :

ಅ)  ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕರ್ನಾಟಕ ನಿಯಮಗಳು, 2016:

ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2015 ಕೇಂದ್ರ ಕಾಯ್ದೆಯಾಗಿದ್ದು, ಜನವರಿ 2015 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಗೆ ಭಾರತ ಸರ್ಕಾರವು  (ಮಕ್ಕಳ ಪಾಲನೆ ಹಾಗೂ ರಕ್ಷಣೆ) ನಿಯಮಾವಳಿ 2000 ರೂಪಿಸಿದ್ದು ಈ ನಿಯಮಾವಳಿಗಳು 25 ಸೆಪ್ಟೆಂಬರ್ 2008 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುತ್ತದೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ   ರಾಜ್ಯ ನಿಯಮಾವಳಿಗಳನ್ನು  ರಚಿಸಿ ರಾಜ್ಯ ಪತ್ರದಲ್ಲಿ ದಿನಾಂಕ 30.12.2010ರಂದು  ಪ್ರಕಟಿಸಲಾಗಿದೆ.

2. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ 2012 ಮತ್ತು ನಿಯಮಗಳು : 

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ, 2012 ಕೇಂದ್ರ ಕಾಯ್ದೆಯಾಗಿದ್ದು,  ಜೂನ್ 20, 2012ರಂದು ಕೇಂದ್ರ ಗೆಜೆಟ್‍ನಲ್ಲಿ ಪ್ರಕಟಗೊಂಡಿದ್ದು, ದಿನಾಂಕ: 14.11.2012ರಿಂದ ದೇಶಾದ್ಯಂತ ಈ ಕಾನೂನನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯು ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವಿಷಯಗಳ ಹಿಂಸೆಗಳಿಂದ ರಕ್ಷಿಸುತ್ತದೆ. ಇಂತಹ ಪ್ರಾಸಂಗಿಕ ಪ್ರಕರಣಗಳ ನ್ಯಾಯ ವಿಚಾರಣೆ ಮಾಡಲು “ವಿಶೇಷ ನ್ಯಾಯಾಲಯಗಳನ್ನು” ಸ್ಥಾಪಿಸಲು ಅವಕಾಶ ಮಾಡಿದೆ ಹಾಗೂ ರಾಜ್ಯದಲ್ಲಿ ಈ ನ್ಯಾಯಾಲಯಗಳು ಸ್ಥಾಪಿತಗೊಂಡಿದೆ.

3) ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ.1956 ಮತ್ತು ವಾಡ್ರ್ಸ್ ಕಾಯ್ದೆ, 1860: 

ಭಾರತದಲ್ಲಿ ದತ್ತು ಸಕ್ರಿಯವಾಗಿ ಏಕ ರೀತಿಯ ಕಾಯ್ದೆ ಇಲ್ಲದೆ ಇರುವುದರಿಂದ ಆಯಾ ಧರ್ಮಕ್ಕೆ ಅನುಗುಣವಾಗಿ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಪ್ರಮುಖವಾಗಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ಮತ್ತು ವಾಡ್ರ್ಸ್ ಕಾಯ್ದೆ, 1860 ಈ ಎರಡು ಕಾಯ್ದೆಯಡಿಯಲ್ಲಿ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಡಿಯಲ್ಲಿನ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ಹೀಗಿವೆ.

 

1)      ರಕ್ಷಣೆ, ಸಹಕಾರ ಮತ್ತು ಪುನರ್ವಸತಿಯ ಸೇವೆಗಳು:

ಮಕ್ಕಳ ಸಹಾಯವಾಣಿ ಸೇವೆ:

ಸಂಕಷದಲ್ಲಿರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ ಸಲುವಾಗಿ ಮಕ್ಕಳ ಸಹಾಯವಾಣಿಯು ದೇಶದಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸುರಕ್ಷಿತ ಜಾಲವನ್ನು ಪ್ರತಿಯೊಂದು ಮಗುವೂ ತಲುಪುವ ಗುರಿಯನ್ನು ಮಕ್ಕಳ ಸಹಾಯವಾಣಿ ಹೊಂದಿರುತ್ತದೆ. ಮಕ್ಕಳ ಸಹಾಯವಾಣಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತ ಸರ್ಕಾರದ ಮಕ್ಕಳ ರಕ್ಷಣಾ ಸೇವೆಗಳಲ್ಲಿ ಪ್ರಮುಖವಾದುದಾಗಿದೆ. ಈ ಕಾರ್ಯಕ್ರಮವನ್ನು 1999ರಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಕ್ಕೆ ತರಲಾಗಿದ್ದು, ರಾಜ್ಯದಲ್ಲಿ 24 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದೆ. ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್, ಮುಂಬೈ, ಇದು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ದೇಶದ ಎಲ್ಲಾ ನಗರ ಹಾಗೂ ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ ಸೇವೆಗಳನ್ನು ಅನುಷ್ಠಾನಗೊಳಿಸಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ಈ ಸಂಸ್ಥೆಯನ್ನು ಭಾರತ ಸರ್ಕಾರವು ರಾಷ್ಟ್ರಮಟ್ಟದ ಮಾತೃ ಸಂಸ್ಥೆಯಾಗಿ ಗುರುತಿಸಿದೆ.

ಮಕ್ಕಳ ಸಹಾಯವಾಣಿ ಸೇವೆಯು, ಮಂಗಳೂರು, ಬೆಂಗಳೂರು, ಕಲ್ಬುರ್ಗಿ, ಬೀದರ್, ಧಾರವಾಡ, ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಬಳ್ಳಾರಿ, ಕೋಲಾರ, ಹಾಸನ, ಕೊಪ್ಪಳ, ಕೊಡಗು, ತುಮಕೂರು, ಬೆಳಗಾವಿ, ವಿಜಯಪುರ, ಉಡುಪಿ, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಯಾದಗಿರಿ, ಗದಗ, ಒಳಗೊಂಡಂತೆ ಒಟ್ಟು 24 ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.

 

2) ನಗರ ಮತ್ತು ಅರೆನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು: 

ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕುಟುಂಬದ ಬೆಂಬಲ ಇಲ್ಲದ, ಪಾಲನೆ ಮತ್ತು ಪೋಷಣೆಯ ಅಗತ್ಯವುಳ್ಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೆಂಬಲ ಒದಗಿಸುವುದೇ ಈ ಕಾರ್ಯಕ್ರಮದ ಗುರಿಯಾಗಿರುತ್ತದೆ – ಮುಖ್ಯವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ಚಿಂದಿ ಆಯುವ ಮಕ್ಕಳು, ಬೀದಿ ಮಕ್ಕಳು, ಕೆಲಸ ಮಾಡುವ ಮಕ್ಕಳು, ಅನಾಥ ಮಕ್ಕಳು, ಸಾಗಾಣೆಯಾದ ಮಕ್ಕಳು, ಪರಿತ್ಯಜಿಸಲ್ಪಟ್ಟ ಮಕ್ಕಳು, ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಬೀದಿ ಮಕ್ಕಳು ಇತ್ಯಾದಿ.

 ಉದ್ದೇಶಗಳು:

• ಅನಾಥ ಹಾಗೂ ಅಲಕ್ಷ್ಯ ಬೀದಿ ಮಕ್ಕಳಿಗೆ ಈ ತಂಗುದಾಣಗಳು, ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ಸ್ವಚ್ಚತೆ ಹಾಗೂ ನೈರ್ಮಲ್ಯ, ಕುಡಿಯುವ ಶುದ್ದ ನೀರು, ಶಿಕ್ಷಣ, ಆಟಪಾಠಗಳಿಗೆ ಇತರೆ ಸೌಕರ್ಯಗಳನ್ನು ಒದಗಿಸಿ ಅವರಿಗೆ ಶೋಷಣೆ/ದೌರ್ಜನ್ಯಗಳ ವಿರುದ್ದ ರಕ್ಷಣೆಯನ್ನು ಒದಗಿಸುವುದು.

• ಬೀದಿ ಮಕ್ಕಳನ್ನು ಶಾಲೆಗಳಿಗೆ / ಕೆಲಸಕ್ಕೆ ಸೇರಿಸುವುದು, ವೃತ್ತಿಪರ ಶಿಕ್ಷಣ ನೀಡುವುದು, ಆರೋಗ್ಯ ಸೇವೆಗಳನ್ನು ಒದಗಿಸುವುದು ಹಾಗೂ ಅವರಲ್ಲಿ ಸಾಮಾನ್ಯವಾಗಿರುವ ರೋಗ ಹಾಗೂ ಮಾದಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು. 

ಮನೆ ಅಥವಾ ಕುಟುಂಬದ ಬೆಂಬಲ ಇಲ್ಲದಿರುವ ಬೀದಿ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 24 ಗಂಟೆ ತೆರೆದಿರುವ ತಂಗುದಾಣಗಳನ್ನು ನಡೆಸಲಾಗುತ್ತಿದೆ. ಅಲ್ಲದೇ 2014-15ನೇ ಸಾಲಿಗೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹೊಸದಾಗಿ 18 ಮಕ್ಕಳ ತೆರೆದ ತಂಗುದಾಣಗಳಿಗೆ ಅನುಮೋದನೆ ನೀಡಿದ್ದು, ಈ ಹೊಸದಾದ 18 ತೆರೆದ ತಂಗುದಾಣಗಳು 2014ರ ಅಕ್ಟೋಬರ್ ಮಾಹೆಯಿಂದ ಕಾರ್ಯಾರಂಭ ಮಾಡುತ್ತಿವೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟಾರೆಯಾಗಿ 42 ಮಕ್ಕಳ ತೆರೆದ ತಂಗುದಾಣಗಳಿವೆ. ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡ 90 ರಷ್ಟು ಕೇಂದ್ರ ಸರ್ಕಾರವು ಹಾಗೂ ಉಳಿದ ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಯು ಭರಿಸಬೇಕಾಗುತ್ತದೆ. ಪ್ರಸ್ತುತ 18 ಜಿಲ್ಲೆಗಳಲ್ಲಿ 42 ತೆರೆದ ತಂಗುದಾಣಗಳನ್ನು 40 ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.

 

3.ಕುಟುಂಬ ಆಧಾರಿತ ಅಸಾಂಸ್ಥಿಕ ಸೇವೆಗಳು ಪ್ರಾಯೋಜಕತ್ವ, ಪೋಷಕತ್ವ, ದತ್ತು ಕಾರ್ಯಕ್ರಮ ಹಾಗೂ ಅನುಪಾಲನಾ ಸೇವೆ:

ಅ. ಪ್ರಾಯೋಜಕತ್ವ ಕಾರ್ಯಕ್ರಮ:

ಪ್ರಾಯೋಜಕತ್ವ ಕಾರ್ಯಕ್ರಮವು ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪೂರಕವಾದ ಕಾರ್ಯಕ್ರಮವಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರವು 2006-07ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಬಡತನದ ಕುಟುಂಬದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯ, ಚಿಕಿತ್ಸೆ, ಪೌಷ್ಠಿಕ ಆಹಾರ ಮತ್ತು ಶಿಕ್ಷಣಕ್ಕೆ ರೂ. 1000/- ಗಳ ಆರ್ಥಿಕ ಸಹಾಯವನ್ನು ನೀಡುವುದಾಗಿದೆ.

ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಆದೇಶ ಸಂ:ಮಮಇ 159 ಮಭಾಬ 2012, ಬೆಂಗಳೂರು ದಿನಾಂಕ: 13-03-2013 ರಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಹೊರಡಿಸಿರುತ್ತದೆ.

ಆ. ಪೋಷಕತ್ವ: 

• ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರೆ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ವಿಸ್ತೃತ ಕುಟುಂಬ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವ ಹಾಗೂ ಕಾರಣಾಂತರಗಳಿಂದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ನೀಡುವ ಪರ್ಯಾಯ ವ್ಯವಸ್ಥೆ. ಅಂತಿಮವಾಗಿ ಕುಟುಂಬದ ಸ್ಥಿತಿ ಸುಧಾರಿಸಿದಾಗ ಮಕ್ಕಳನ್ನು ಪುನರ್ಮಿಲನ ಮಾಡುವುದು ಹಾಗೂ ಅತ್ಯಂತ ಕ್ಲಿಷ್ಟಕರವಾದ ಸಂದರ್ಭಗಳಲ್ಲಿ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸುವುದು ಪೋಷಕತ್ವ ಕಾರ್ಯಕ್ರಮದ ಗುರಿ.

ಇ. ಮಕ್ಕಳನ್ನು ದತ್ತು ನೀಡುವ ಕಾರ್ಯಕ್ರಮ:

ದತ್ತು ಪಕ್ರಿಯೆಯು ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ಶಿಫಾರಸ್ಸು ಮಾಡಲಾಗುವ ಒಂದು ಸೂಕ್ತ ಕಾರ್ಯಕ್ರಮ. ಇಂತಹ ಮಕ್ಕಳಿಗೆ ಕುಟುಂಬದ ವಾತಾವರಣ ಕಲ್ಪಿಸಿ ಮಗುವಿಗೆ ಖಾಯಂ ಆಗಿ ಜೈವಿಕ ಮಕ್ಕಳನ್ನು ಹೊಂದಿಲ್ಲದ ಪೋಷಕರನ್ನು ಒದಗಿಸಿಕೊಟ್ಟು ಸಾಮಾಜಿಕವಾಗಿ ಹಾಗೂ ಕಾನೂನು ಬದ್ದವಾಗಿ ಕುಟುಂಬದ ವಾತಾವರಣವನ್ನು ಸೃಷ್ಟಿಸುವುದಾಗಿದೆ. ಮಗುವಿಗೆ ಅವಶ್ಯವಿರುವ  ಪ್ರೀತಿ ಮತ್ತು ಆರೈಕೆಯನ್ನು ಕುಟುಂಬ ವಾತಾವರಣವು ಕಲ್ಪಿಸುತ್ತದೆ. ದತ್ತು ಕಾರ್ಯಕ್ರಮವು ಮಗು ಮತ್ತು ಪೋಷಕರಿಗೆ ಪರಸ್ಪರ ಅನಿವಾರ್ಯತೆ ಅನ್ಯೋನ್ಯ ಸಂಬಂಧವನ್ನು ಕಲ್ಪಿಸುವುದಾಗಿದೆ. ದತ್ತು ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ಕಾನೂನು ಬದ್ಧವಾಗಿ ಸ್ವದೇಶಿ ದತ್ತು ಕಾರ್ಯಕ್ರಮವನ್ನು ಉತ್ತೇಜಿಸುವುದು ಮತ್ತು ಕಾನೂನು ಬಾಹಿರವಾಗಿ ನಡೆಯುವ ದತ್ತು ಪ್ರಕ್ರಿಯೆಯನ್ನು ತಡೆಯುವುದಾಗಿದೆ.

ಸ್ವದೇಶಿ ಮತ್ತು ವಿದೇಶಿ ದತ್ತು ಪ್ರಕ್ರಿಯೆಯನ್ನು 25 ಸ್ವಯಂ ಸೇವಾ ಸಂಸ್ಥೆಗಳು ಹಾಗೂ 5 (6 ಘಟಕ) ಸರ್ಕಾರಿ ವಿಶೇಷ ದತ್ತು ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಾ 31 ವಿಶೇಷ ದತ್ತು ಸಂಸ್ಥೆಗಳು ಸ್ವದೇಶಿ ದತ್ತು ಕಾರ್ಯಕ್ರಮವನ್ನು ನಡೆಸುತ್ತಿವೆ. ಇವುಗಳಲ್ಲಿ 5 ಸಂಸ್ಥೆಗಳಿಗೆ ವಿದೇಶಿ ದತ್ತು ನೀಡಲು ಕಾರಾದಿಂದ ಪರವಾನಗಿ ನೀಡಲಾಗಿರುತ್ತದೆ.

ರಾಜ್ಯ ಸರ್ಕಾರದಿಂದ 2011ರಲ್ಲಿ ಸಾರಾ ಸಮಿತಿ ರಚನೆಯಾಗಿರುತ್ತದೆ. ಸಮಗ್ರ ಮಕ್ಕಳ ರಕ್ಷಣಾ ಸೊಸ್ಶೆಟಿಯು ರಾಜ್ಯದಲ್ಲಿ ಮಾನ್ಯತೆ ಪಡೆದ ದತ್ತು ಸಂಸ್ಥೆಗಳ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲಾಗುವುದು.

1. ತೊಟ್ಟಿಲ ಸ್ವೀಕಾರ ಕೇಂದ್ರ:

ಲಕ್ಷಾಂತರ ನವಜಾತ ಶಿಶುಗಳು ಹಲವಾರು ಕಾರಣಗಳಿಂದ ಅನಾಥರಾಗುತ್ತಿದ್ದು, ಇದರಲ್ಲಿ  ಪ್ರಮುಖ ಕಾರಣವೆಂದರೆ ಅವಿವಾಹಿತ ಮಹಿಳೆಯರು ತಾಯಿಯಾಗುತ್ತಿರುವುದು. ಇಂತಹ ಮಕ್ಕಳು ಅಪ್ರಾಮಾಣಿಕ ವ್ಯಕ್ತಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಬಲಿಪಶುವಾಗುವುದನ್ನು ನಿಯಂತ್ರಿಸಲು ತೊಟ್ಟಿಲು ಶಿಶು ಸ್ವೀಕಾರ ಕೇಂದ್ರವನ್ನು ಪ್ರಾರಂಭಿಸಲಾಗಿರುತ್ತದೆ. ಇಂತಹ ನವಜಾತ, ಪರಿತ್ಯಕ್ತ, ಅನಾಥ ಮಕ್ಕಳಿಗೆ ಪಾಲನೆ ಮತ್ತು ಪೋಷಣೆ, ಅಭಿರಕ್ಷಣೆ ನೀಡಿ ಜೀವವನ್ನು ಉಳಿಸಲು ವಿಶೇಷ ದತ್ತು ಸಂಸ್ಥೆಗಳು, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಖಾಸಗಿ ನರ್ಸಿಂಗ್ ಹೋಂಗಳು, ಅಲ್ಪಾವಧಿ ರಕ್ಷಣಾ ಗೃಹಗಳು, ಸ್ವಾಧಾರ ಕೇಂದ್ರಗಳಲ್ಲಿ, ತೊಟ್ಟಿಲು ಸೌಲಭ್ಯವನ್ನು ಕಲ್ಪಿಸಿ ಮಕ್ಕಳನ್ನು ಸ್ವೀಕರಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

2. ಅನುಪಾಲನಾ ಸೇವೆಗಳು:

ಬಾಲಮಂದಿರಗಳಿಂದ 18 ವರ್ಷ ಪೂರ್ಣಗೊಂಡ ಮಕ್ಕಳು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ, ಮಕ್ಕಳ ಕಲ್ಯಾಣ ಸಮಿತಿಯು ಅಂತಹ ಮಕ್ಕಳಿಗೆ ಸಮಾಜದೊಡನೆ ಬೆರೆಯಲು ಇನ್ನೂ ಕಾಲಾವಕಾಶದ ಅಗತ್ಯವೆಂದು ಅಭಿಪ್ರಾಯಪಟ್ಟಲ್ಲಿ ಅಥವಾ ಇನ್ಯಾವುದೇ ಪ್ರಮುಖ ಕಾರಣದಿಂದ ಮಗುವಿಗೆ ಸಂಸ್ಥೆಯ ನೆರವು ಅಗತ್ಯವೆನಿಸಿದಲ್ಲಿ ಅಂತಹ ಮಕ್ಕಳಿಗೆ ಅನುಪಾಲನಾ ಸೇವೆಗಾಗಿ ಆದೇಶ ಮಾಡಿದಲ್ಲಿ ಗಂಡು ಮಕ್ಕಳನ್ನು  ಪುರುಷ ಅನುಪಾಲನಾ ಗೃಹಗಳಿಗೆ  ಹಾಗೂ ಹೆಣ್ಣು ಮಕ್ಕಳನ್ನು ರಾಜ್ಯ ಮಹಿಳಾ ನಿಲಯಗಳಿಗೆ ದಾಖಲು ಮಾಡಲಾಗುವುದು.

ಬೆಳಗಾವಿಯಲ್ಲಿ ಬಾಲಕರಿಗಾಗಿ ಒಂದು ಪ್ರತ್ಯೇಕ ಅನುಪಾಲನಾ ಗೃಹ, ಬೆಂಗಳೂರಿನಲ್ಲಿ ಬಾಲಕರ ಬಾಲಮಂದಿರಕ್ಕೆ ಹೊಂದಿಕೊಂಡಂತೆ ಒಂದು ಘಟಕ ಹಾಗೂ ಬುದ್ಧಿಮಾಂದ್ಯ ಮಕ್ಕಳ ಬಾಲಮಂದಿರಕ್ಕೆ  ಹೊಂದಿಕೊಂಡಂತೆ ಇನ್ನೊಂದು ಘಟಕ ಸೇರಿ ಒಟ್ಟು 3 ಅನುಪಾಲನಾ ಗೃಹಗಳಿವೆ. ಸದರಿ ಸಂಸ್ಥೆಯ ನಿವಾಸಿಗಳು ಪ್ರೌಢಶಾಲೆ, ಐ.ಟಿ.ಐ. ಡಿಪ್ಲೋಮಾ, ಕಾಲೇಜು  ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ.

ಇ. ಸಾಂಸ್ಥಿಕ ಸೇವೆಗಳು:

1. ಬಾಲ ಮಂದಿರಗಳು:

ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳ ಪ್ರಕರಣಗಳ ವಿಚಾರಣೆ ವೇಳೆಯಲ್ಲಿ ಹಾಗೂ ದೀರ್ಘಾವಧಿ ಪುನರ್ವಸತಿ ಅಗತ್ಯವಿರುವ ಅನಾಥ ಹಾಗೂ ನಿರ್ಗತಿಕ ಮಕ್ಕಳ ಪಾಲನೆ ಮತ್ತು ರಕ್ಷಣೆಯ ಉದ್ದೇಶದಿಂದ ಬಾಲನ್ಯಾಯ ಕಾಯ್ದೆ ಸೆಕ್ಷನ್ 30ರನ್ವಯ ಬಾಲಮಂದಿರಗಳನ್ನು (ಬಾಲಕ/ಬಾಲಕಿಯರ) ಸ್ಥಾಪಿಸಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳನ್ನು  ಸಮಿತಿಯ ಆದೇಶದನ್ವಯ ಬಾಲಮಂದಿರಗಳಿಗೆ ದಾಖಲು ಮಾಡಿಕೊಳ್ಳಲಾಗುವುದು.  ಈ ರೀತಿ ಅಭಿರಕ್ಷಣೆಗೆ ಒಳಪಟ್ಟ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ ಒದಗಿಸುವುದರ ಜೊತೆಗೆ ಪುನರ್ವಸತಿಗೆ ಅಗತ್ಯವಾದ ಶಿಕ್ಷಣ ಹಾಗೂ ತರಬೇತಿಯನ್ನು ಒದಗಿಸಲಾಗುವುದು. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಶಾಲೆ ಮತ್ತು ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

ರಾಜ್ಯದಲ್ಲಿ ಒಟ್ಟು 56 ಬಾಲಮಂದಿರಗಳಿದ್ದು, ಇವುಗಳಲ್ಲಿ 28 ಬಾಲಕರಿಗಾಗಿ ಹಾಗು 27 ಬಾಲಕಿಯರಿಗಾಗಿ ಹಾಗು 1 ಶಿಶುಮಂದಿರ 6 ವರ್ಷದೊಳಗಿನ ಮಕ್ಕಳಿಗಾಗಿ(ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ) ಕಾರ್ಯನಿರ್ವಹಿಸುತ್ತಿವೆ, ಇವುಗಳಲ್ಲಿ ಮನೋವಿಕಲ ಗಂಡು ಮಕ್ಕಳಿಗಾಗಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ, ಹೆಣ್ಣು ಮಕ್ಕಳಿಗಾಗಿ ಹುಬ್ಬಳ್ಳಿ  ಹಾಗೂ ಗುಲ್ಬರ್ಗಾದಲ್ಲಿ ಬಾಲ ಮಂದಿರಗಳನ್ನು ನಡೆಸಲಾಗುತ್ತಿದೆ. 18 ರಿಂದ 21 ವರ್ಷದವರಿಗಾಗಿ ಬೆಳಗಾವಿಯಲ್ಲಿ ಪುರುಷರ ಅನುಪಾಲನಾ ಗೃಹವನ್ಮ್ನ ಸ್ಥಾಪಿಸಲಾಗಿದೆ.

2. ಅರ್ಹ ಸಂಸ್ಥೆಗಳು:

ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಹಾಗೂ ಪುನರ್ವಸತಿ  ಒದಗಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ನೋಂದಣಿ ಮಾಡಲು ಅವಕಾಶವಿದ್ದು ಇಂತಹ 08 ಸಂಸ್ಥೆಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ.

3. ವೀಕ್ಷಣಾಲಯಗಳು:

ವೀಕ್ಷಣಾಲಯಗಳು ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳ, ಅವರ ವಿರುದ್ಧದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಗಳಾಗಿರುತ್ತವೆ. ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಶಾಸನಗಳನ್ವಯ ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳನ್ನು ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ)ಕಾಯ್ದೆ 2000ರ ಸೆಕ್ಷನ್ (4)ರಡಿ ಹಾಗೂ ತಿದ್ದುಪಡಿ ಕಾಯ್ದೆ 2006 ಸ್ಥಾಪಿಸಿರುವ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು.

ಕಾನೂನಿನೊಡನೆ ಸಂಘರ್ಷಣೆಗೆ ಒಳಪಟ್ಟ ಮಕ್ಕಳನ್ನು ವಿಚಾರಣಾ ಅವಧಿಯಲ್ಲಿ ಸಾಮಾನ್ಯವಾಗಿ 6 ತಿಂಗಳವರೆಗೆ ಪರಿವೀಕ್ಷಣೆಗಾಗಿ ವೀಕ್ಷಣಾಲಯದಲ್ಲಿ ಇಡಲಾಗುವುದು. ರಾಜ್ಯ ಸರ್ಕಾರ 16 ವೀಕ್ಷಣಾಲಯಗಳನ್ನು ಮಂಜೂರು ಮಾಡಿದ್ದು ಪ್ರಸ್ತುತ  16 ವೀಕ್ಷಣಾಲಯಗಳು  ಕಾರ್ಯನಿರ್ವಹಿಸುತ್ತಿವೆ.

4.ವಿಶೇಷ  ಗೃಹಗಳು:

ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2000 ರ ಅಧಿನಿಯಮ  ಸೆಕ್ಷನ್ 15ರಡಿ ಹಾಗೂ ತಿದ್ದುಪಡಿ ಕಾಯ್ದೆ 2006ರ ಅನ್ವಯ ಆದೇಶ ಮಾಡಿದ ಕಾನೂನಿನ ಸಂರ್ಘಷಕ್ಕೆ ಒಳಗಾದ ಮಕ್ಕಳ ದೀರ್ಘಾವಧಿ ಪುನರ್ವಸತಿಗಾಗಿ  ವಿಶೇಷ ಗೃಹವನ್ನು ಸ್ಥಾಪಿಸಬೇಕಾಗಿದ್ದು, ಅದರಂತೆ ಬೆಂಗಳೂರು (ನಗರ)  ಹಾಗೂ ಬೆಳಗಾವಿಯಲ್ಲಿ ವೀಕ್ಷಣಾಲಯಕ್ಕೆ ಹೊಂದಿಕೊಂಡಂತೆ ಗಂಡು ಮಕ್ಕಳಿಗಾಗಿ ಹಾಗೂ ಬೆಂಗಳೂರು (ಗ್ರಾಮಾಂತರ) ಮತ್ತು ದಾವಣಗೆರೆ ವೀಕ್ಷಣಾಲಯಕ್ಕೆ ಹೊಂದಿಕೊಂಡಂತೆ ಹೆಣ್ಣು ಮಕ್ಕಳಿಗಾಗಿ ಸ್ಥಾಪಿಸಲಾಗಿದೆ.

 

ಸರ್ಕಾರವು ಏಕೋ (ಸೆಂಟರ್ ಫಾರ್ ಜುವಿನೈಲ್ ಜಸ್ಟೀಸ್), ಎಂಬ ಸ್ವಯಂ ಸೇವಾ ಸಂಸ್ಥೆಯನ್ನು  ಅರ್ಹ ಸಂಸ್ಥೆಯೆಂದು  ಮಾನ್ಯತೆ ನೀಡಿ ಬೆಂಗಳೂರು ನಗರದಲ್ಲಿ ವಿಶೇಷ ಗೃಹವನ್ನು ನಡೆಸಲು ಅನುಮತಿ ನೀಡಿರುತ್ತದೆ.

ಹೆಚ್.ಐ.ವಿ/ಏಡ್ಸ್ ಪೀಡಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆ :

ಹೆಚ್.ಐ.ವಿ/ಏಡ್ಸ್ ನಿಂದ ಭಾದಿತ ಮಕ್ಕಳಿಗೆ ಹಾಗೂ ಹೆಚ್.ಐ.ವಿ/ಏಡ್ಸ್ ಸೋಂಕಿತ ಮಕ್ಕಳಿಗೆ ರಕ್ಷಣೆ ಮತ್ತು ಪೋಷಣೆಯನ್ನು ಒದಗಿಸುವ  ಮುಖ್ಯ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಮಾರ್ಚ್ 2010ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಮಕ್ಕಳ ರಕ್ಷಣೆ ಮತ್ತು ಚಿಕಿತ್ಸೆಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ಅವರ ರಕ್ಷಣೆಯನ್ನು ಮಾಡುವಲ್ಲಿ ನ್ಯೂನ್ಯತೆಗಳು ಕಂಡು ಬಂದಿರುತ್ತದೆ.

ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯು ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ, ಆರ್‍ಡಿಪಿಆರ್, ಸಾರಿಗೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನಾ ಟ್ರಸ್ಟ್‍ನ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಲಿದೆ.

ಶಾಸನಬದ್ದ ಪೂರಕ ಸೇವೆಗಳು :

1. ಮಕ್ಕಳ ಕಲ್ಯಾಣ ಸಮಿತಿ

ಬಾಲನ್ಯಾಯ ಕಾಯ್ದೆಯ ಅನ್ವಯ ಮಕ್ಕಳ ಕಲ್ಯಾಣ ಸಮಿತಿಯು ಅಧ್ಯಕ್ಷರು ಮತ್ತು ನಾಲ್ಕು ಸದಸ್ಯರನ್ನು ಒಳಗೊಂಡಿದ್ದು, ನಾಲ್ಕು ಸದಸ್ಯರಲ್ಲಿ ಒಬ್ಬರು ಮಹಿಳೆ ಮತ್ತು ಒಬ್ಬರು ಮಕ್ಕಳ ವಿಷಯದಲ್ಲಿ ಪರಿಣಿತರಾಗಿದ್ದು, ಇವರುಗಳು ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳ ಬಗ್ಗೆ ಅಧಿಕಾರ ಚಲಾಯಿಸುವರು ಹಾಗೂ ಕರ್ತವ್ಯ ನಿರ್ವಹಿಸುವರು.

ಎಲ್ಲಾ 30 ಜಿಲ್ಲೆಗಳಲ್ಲಿ ಒಟ್ಟು 33 ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಗಂಡು ಮಕ್ಕಳಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಸೇರಿದಂತೆ ಒಟ್ಟು ಮೂರು ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 2 ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ.

ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ 2000 ಮತ್ತು ತಿದ್ದುಪಡಿ ಕಾಯ್ದೆ 2006, ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕರ್ನಾಟಕ ನಿಯಮಗಳು 2010ರ ನಿಯಮ 22(1) ರನ್ವಯ 30/06/2014 ಮತ್ತು 27/09/2014 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 33 ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು 3 ವರ್ಷಗಳ ಅವಧಿಗೆ ನೇಮಕಾತಿ ಮಾಡಲಾಗಿದೆ. ಸದಸ್ಯರಲ್ಲಿ ಕನಿಷ್ಠ ಒಬ್ಬರು ಮಹಿಳಾ ಸದಸ್ಯರು ಇರಲೇ ಬೇಕು.

2. ಬಾಲ ನ್ಯಾಯ ಮಂಡಳಿ

ಬಾಲನ್ಯಾಯ ಕಾಯ್ದೆಯ ಅನ್ವಯ ಬಾಲ ನ್ಯಾಯ ಮಂಡಳಿಯಲ್ಲಿ ಮೂವರು ಸದಸ್ಯರಿರುವರು. ಬೆಂಗಳೂರು ನಗರದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರ್ ಹಾಗೂ ಉಳಿದ ಜಿಲ್ಲೆಗಳಲ್ಲಿ ಮುಖ್ಯ  ನ್ಯಾಯಿಕ ದಂಡಾಧಿಕಾರಿಗಳು ಬಾಲ ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.  ಉಳಿದ ಎರಡು  ಸದಸ್ಯರು ಸಮಾಜ ಸೇವಾಕರ್ತರಾಗಿದ್ದು, ಇವರುಗಳು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಂತಹ ರಾಜ್ಯ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡವರಾಗಿರುತ್ತಾರೆ. ಎಲ್ಲಾ 30 ಜಿಲ್ಲೆಗಳಲ್ಲಿ ಬಾಲ ನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ.

ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ 2000 ಮತ್ತು ತಿದ್ದುಪಡಿ ಕಾಯ್ದೆ 2006, ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕರ್ನಾಟಕ ನಿಯಮಗಳು 2010ರ ನಿಯಮ 4(2) ರನ್ವಯ 30/06/2014 ಮತ್ತು 27/09/2014 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 30 ಬಾಲ ನ್ಯಾಯ ಮಂಡಳಿ ಸದಸ್ಯರನ್ನು 3 ವರ್ಷಗಳ ಅವಧಿಗೆ ನೇಮಕಾತಿ ಮಾಡಲಾಗಿದೆ. ಸದಸ್ಯರಲ್ಲಿ ಕನಿಷ್ಠ ಒಬ್ಬರು ಮಹಿಳಾ ಸದಸ್ಯರು ಇರಲೇ ಬೇಕು.

3. ಮಕ್ಕಳ ವಿಶೇಷ ಪೊಲೀಸ್ ಘಟಕಗಳು

ಮಕ್ಕಳ ವಿಶೇಷ ಪೊಲೀಸ್ ಘಟಕವು ಜಿಲ್ಲಾ ಮಟ್ಟದಲ್ಲಿ ಮಕ್ಕಳ ಪ್ರಕರಣಗಳನ್ನು ನಿರ್ವಹಣೆ ಮಾಡುವ ಒಂದು ಪೊಲೀಸ್ ಘಟಕವಾಗಿರುತ್ತದೆ. ಮಕ್ಕಳ ವಿಶೇಷ ಪೊಲೀಸ್ ಘಟಕದಲ್ಲಿ ಐವರು ಸದಸ್ಯರಿರುವರು. ಪ್ರತಿ ಮಕ್ಕಳ ವಿಶೇಷ ಪೊಲೀಸ್  ಘಟಕಕ್ಕೆ ಪೊಲೀಸ್ ಇನ್ಸಪೆಕ್ಟರ್‍ಗಿಂತ ಮೇಲಿನ ರ್ಯಾಂಕಿನವರು ಅಧಿಕಾರಿಯಾಗಿದ್ದು ಅವರನ್ನು “ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿ” ಎಂದು ಗುರುತಿಸಲಾಗಿದೆ. ಈ ಘಟಕಕ್ಕೆ ಇಬ್ಬರು ಪೊಲೀಸ್ ಕಾನಸ್ಟೇಬಲ್‍ಗಳನ್ನು  ಮಕ್ಕಳ ಪ್ರಕರಣಗಳನ್ನು ನಿರ್ವಹಿಸಲು, ದಾಖಲೀಕರಣ ಮತ್ತು ವರದಿ ತಯಾರಿಕೆಯಲ್ಲಿ ಸಹಕರಿಸಲು ನಿಯೋಜಿಸಲಾಗಿರುತ್ತದೆ.  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಇಬ್ಬರು ಸಮಾಜ ಕಾರ್ಯಕರ್ತರು ಮಕ್ಕಳ ವಿಶೇಷ ಪೋಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗೆ ಹಾಗೂ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಅಧಿಕಾರಿಗೆ ಮಕ್ಕಳ ಪ್ರಕರಣಗಳನ್ನು ನಿರ್ವಹಿಸಲು ಸಹಾಯ ಮಾಡುವರು. ಪೊಲೀಸ್ ಇಲಾಖೆಯಿಂದ 40 ಮಕ್ಕಳ ವಿಶೇಷ ಪೊಲೀಸ್ ಘಟಕಗಳನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ 7 ವಲಯಗಳು, ಎಲ್ಲಾ 30 ಜಿಲ್ಲೆಗಳಲ್ಲಿ ಹಾಗೂ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ 3 ಒಟ್ಟು 40 ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ಕಾಣೆಯಾದ ಮಕ್ಕಳ ಬ್ಯೂರೋ :

• ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2000 ರ ಪ್ರಕಾರ ಕಾಣೆಯಾದ ಮಕ್ಕಳ ಬ್ಯೂರೋವನ್ನು 2007-08 ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದೆ.

• ರಾಜ್ಯದ 26 ಜಿಲ್ಲೆಗಳಲ್ಲಿ ನೋಡಲ್ ಸಂಸ್ಥೆಯು ಈ ಕಾರ್ಯಕ್ರಮಗಳನ್ನು ಆರಂಭಿಸಿರುತ್ತದೆ.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s