ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ

bhagirathaಭಗೀರಥನು ಬಹುದೊಡ್ಡ ಮಹಾರಾಜ. ಅವನಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು.ಅವನ ತೆಂದೆ ಮತ್ತು ತಾತಂದಿರು `ದೇವಗಂಗೆಯನ್ನು ಪಡೆಯಬೇಕು’ ಎಂದು ಆಸೆ ಪಡುತ್ತ ಅದು ಈಡೇರದೆ ಸತ್ತುಹೋಗಿದ್ದರು.

“ಹೇಗಾದರೂ ಮಾಡಿ ನಾನಾದರೂ ದೇವಗಂಗೆಯನ್ನು ಪಡೆದುಕೊಳ್ಳಬೇಕು” ಎಂದು ಭಗೀರಥ ಪ್ರತಿಜ್ಞೆ ಮಾಡಿದ.

ಭಗೀರಥ ಛಲಗಾರ. ಅವನು ದೇವಗಂಗೆಯನ್ನು ಕುರಿತು ಘೋರವಾದ ತಪಸ್ಸು ಮಾಡಿದ. ಅವನ ತಪಸ್ಸಿಗೆ ಮೆಚ್ಚಿ ಗಂಗೆ ಪ್ರತ್ಯಕ್ಷಳಾಗಿ:

“ನಿನಗೇನು ವರ ಬೇಕು ಕೇಳು ಭಗೀರಥ” ಎಂದಳು.

“ನೀನು ಭೂಮಿಗೆ ಇಳಿಯಬೇಕು. ನನ್ನ ತಂದೆ ತಾತಂದಿರನ್ನು ಪವಿತ್ರಗೊಳಿಸಬೇಕು” ಎಂದು ಬೇಡಿದ ಭಗೀರಥ.

“ತಥಾಸ್ತು” ಎಂದು ನುಡಿದಳು ದೇವಿ. “ಆದರೆ ಭಗೀರಥ, ನಾನು ಆಕಾಶದಿಂದ ಭೂಮಿಗೆ ಧುಮುಕುವಾಗ ನನ್ನ ರಭಸವನ್ನು ತಡೆಯುವವರು ಯಾರು? ಆ ರಭಸಕ್ಕೆ ಇಡೀ ಭೂಮಂಡಲವೇ ಕೊಚ್ಚಿ ಹೋದರೇನು ಗತಿ? ಇಷ್ಟು ಮಾತ್ರವಲ್ಲ, ಭೂಮಿಯ ಮೇಲಿನ ಪಾಪಿಗಳೆಲ್ಲಾ ನನ್ನಲ್ಲಿ ಮಿಂದು ತಮ್ಮ ಪಾಪಗಳನ್ನು ಕಳೆದುಕೊಂಡರೆ, ಆ ಪಾಪಗಳನ್ನು ನಾನೆಲ್ಲಿ ತೊಳೆದುಕೊಳ್ಳಲಿ ಹೇಳು?” ಎಂದು ಪ್ರಶ್ನೆ ಹಾಕಿದಳು ಗಂಗಾಮಾತೆ.

“ದೇವೀ, ನಿನ್ನ ರಭಸವನ್ನು ತಡೆಹಿಡಿಯುವಂತೆ ನಾನು ಪರಶಿವನನ್ನು ಪ್ರಾರ್ಥಿಸುತ್ತೇನೆ. ಪಾಪಿಗಳು ನಿನ್ನಲ್ಲಿ ಸ್ನಾನ ಮಾಡುವಂತೆ ಜ್ಞಾನಿಗಳೂ ನಿನ್ನಲ್ಲಿ ಮೀಯುತ್ತಾರೆ. ಅವರ ಸಂಪರ್ಕದಿಂದ ಪಾಪಗಳು ಕೊಚ್ಚಿ ಹೋಗುತ್ತವೆ” ಎಂದ ಭಗೀರಥ.

ಗಂಗೆ ಈ ಮಾತಿಗೆ ಒಪ್ಪಿದಳು.

ಭಗೀರಥ ಶಿವನನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾದ. ಗಂಗೆ ಆಕಾಶದಿಂದ ಧುಮ್ಮಿಕ್ಕಿದಳು. ಶಿವನು ಅವಳನ್ನು ಜಟೆಯಲ್ಲಿ ಧರಿಸಿದ. ಅಲ್ಲಿಂದ ಅವಳು ಭೂಮಿಗಿಳಿದು ಭಗೀರಥನ ರಥದ ಹಿಂದೆ ಹರಿಯುತ್ತಾ ಹೊರಟಳು. ಮುಟ್ಟಿದ ಜಾಗವನ್ನೆಲ್ಲಾ ಪವಿತ್ರಗೊಳಿಸುತ್ತಾ ಭಗೀರಥನ ತಂದೆ ತಾತಂದಿರಿಗೆ ಸ್ವರ್ಗ ಪ್ರಾಪ್ತಿಯಾಗುವ ಹಾಗೆ ಮಾಡಿದಳು.

ಭಗೀರಥ ತನ್ನ ಹಟದಿಂದ ಅಸಾಧ್ಯವಾದುದನ್ನೂ ಸಾಧಿಸಿದ.
ಭಗೀರಥನ ಸಾಧನೆ:

ಸಗರನೆಂಬಾತ ಸಜ್ಜನರನ್ನು ಬಾಧಿಸುತ್ತಿದ್ದ ರಾಜರನ್ನೆಲ್ಲಾ ಸೋಲಿಸಿ ಚಕ್ರವರ್ತಿಯಾದ. ತೊಂಬತ್ತೊಂಬತ್ತು ಅಶ್ವಮೇಧ ಯಾಗಗಳನ್ನು ಮಾಡಿದ. ಇನ್ನು ಒಂದು ಯಾಗ ಮಾಡಿದರೆ ಅವನು ಸ್ವರ್ಗದ ಒಡೆಯನಾಗಬಹುದೆಂದು ಹೆದರಿ ಇಂದ್ರನು ಯಾಗದ ಕುದುರೆಯನ್ನು ಅಪಹರಿಸಿ ಪಾತಾಳಲೋಕಕ್ಕೊಯ್ದು ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯ ಹಿಂಬಾಗದಲ್ಲಿ ಕಟ್ಟಿ ಹಾಕಿದ.

ಸಗರನಿಗೆ ಅರವತ್ತು ಸಾವಿರ ಮಂದಿ ಮಕ್ಕಳಿದ್ದರು. ಅವರು ಯಾಗದ ಕುದುರೆಯನ್ನು ಇಡೀ ಭೂಮಿಯಲ್ಲಿ ಹುಡುಕಿದರೂ ಸಿಗದೆ ಕಡೆಗೆ ಪಾತಾಳಲೋಕಕ್ಕೆ ಹೋಗಿ, ಕುದುರೆಯನ್ನು ಕಂಡರು. ಕಪಿಲಮುನಿಯೇ ಕುದುರೆ ಕಳ್ಳನೆಂದು ಭಾವಿಸಿ ಅವನ ತಪೋಭಂಗ ಮಾಡಿದರು. ಕಪಿಲನು ಕಣ್ತೆರೆದಾಗ ಕಣ್ಣುಗಳಲ್ಲಿಂದ ಸೂಸಿದ ಬೆಂಕಿಯಲ್ಲಿ ಭಸ್ಮವಾದರು.

ಸಗರನ ಮೊಮ್ಮಗ ಅಂಶುಮಂತ. ಬಹುಕಾಲ ವಾದರೂ ಕುದುರೆಯನ್ನು ಹುಡುಕಲು ಹೋದ ವರು ಹಿಂತಿರುಗಲಿಲ್ಲವೆಂದು ಅವನು ಹುಡುಕುತ್ತ ಪಾತಾಳಲೋಕವನ್ನು ತಲುಪಿದ. ಅಲ್ಲಿ ಕಪಿಲ ಮುನಿಯ ಮುಂದಿರುವ ಬೂದಿರಾಶಿ, ಹಿಂದಿರುವ ಕುದುರೆ ಕಂಡು ಪರಿಸ್ಥಿತಿಯ ಅರಿವಾಯಿತು. ಬಹು ವಿಧದಿಂದ ಮುನಿಯನ್ನು ಕೊಂಡಾಡಿ ಪ್ರಸನ್ನಗೊ ಳಿಸಿದ. ಮುನಿಯು ಅವನನ್ನು ಅನುಗ್ರಹಿಸಿ, ಕುದುರೆಯನ್ನು ಅವನಿ ಗೊಪ್ಪಿಸಿದ. ಆದರೆ ಭಸ್ಮವಾದ ಸಗರ ಪುತ್ರರಿಗೆ ಮೋಕ್ಷ ಸಿಗಬೇಕಾದರೆ ಆಕಾಶಗಂಗೆಯು ಇಲ್ಲಿಗೆ ಧುಮುಕಿ ಈ ಬೂದಿಯನ್ನು ಕೊಚ್ಚಿಕೊಂಡು ಹೋಗಬೇಕು. ದೇವಗಂಗೆಯನ್ನು ತಪಸ್ಸಿನಿಂದ ಒಲಿಸಿಕೊಳ್ಳಬೇಕೆಂದು ಹೇಳಿದ.
ಆಂಶುಮಂತನು ಕುದುರೆಯೊಂದಿಗೆ ಹಿಂದಿರುಗಿ ವಿಷಯವನ್ನು ಸಗರನಿಗೆ ತಿಳಿಸಿದ. ಯಾಗ ಮುಗಿಯಿತು. ಸಗರನು ತಪಸ್ಸಿಗಾಗಿ ಕಾಡಿಗೆ ಹೊರಟ.

ತಂದೆಯ ಅಪೇಕ್ಷೆಯತೆಯೇ ಆಂಶುಮಂತನು ಸಿಂಹಾಸನವೇರದೆ ತಪಸ್ಸಿಗಾಗಿ ಕಾಡಿಗೆ ಹೋದ. ಜೀವನವಿಡೀ ತಪೋನಿರತನಾದರೂ ಗಂಗೆ ಒಲಿಯಲಿಲ್ಲ. ನಂತರ ಈ ಹೊಣೆ ಹೊತ್ತ ಮಗ ದಿಲೀಪನೂ ಸಫಲನಾಗದೇ ತನ್ನ ಮಗ ಭಗೀರಥನಿಗೆ ಜವಾಬ್ದಾರಿ ಒಪ್ಪಿಸಿದ.
ಭಗೀರಥನು ಮೊದಲು ಆಹಾರವನ್ನು ತ್ಯಜಿಸಿ ನೀರನ್ನು ಮಾತ್ರ ಕುಡಿಯುತ್ತ್ತಾ ತಪಸ್ಸಿಗೆ ತೊಡಗಿದ. ಮತ್ತೆ ನೀರನ್ನೂ ಸೇವಿಸಲಿಲ್ಲ. ಕಡೆಗೆ ಗಾಳಿಯ ಸೇವನೆಯನ್ನೂ ನಿಲ್ಲಿಸಿ ಉಗ್ರವಾದ ತಪಸ್ಸು ಮುಂದುವರೆಸಿದ. ಅವನ ತಪಸ್ಸಿನ ಬೆಂಕಿಯಿಂದ ಮೂರು ಲೋಕಗಳೂ ಸುಡಲಾರಂಭಿಸಿದವು. ಆಗ ಬ್ರಹ್ಮನು ಅವನೆದುರು ಪ್ರತ್ಯಕ್ಷಳಾಗಲು ಗಂಗೆಯನ್ನು ಕಳುಹಿಸಿದ. ಗಂಗೆಯು ಭಗೀರಥನ ಮುಂದೆ ಕಾಣಿಸಿಕೊಂಡಳು. ಆದರೆ ಅವನ ಕೋರಿಕೆ ಅವಳಿಗೆ ಇಷ್ಟವಾಗಲಿಲ್ಲ. ‘‘ನಾನು ಭೂಮಿಗೆ ಬಂದರೆ ಪಾಪಿಗಳಿರುವ ಭೂಮಿಯ ಜನ ನನ್ನಲ್ಲಿ ಸ್ನಾನ ಮಾಡಿ ಪಾಪಮುಕ್ತರಾಗುತ್ತಾರೆ. ಆಗ ನನಗಂಟಿದ ಪಾಪ ನಿವಾರಣೆಗೆ ಏನಿದೆ ದಾರಿ?’’ ಎಂದು ಕೇಳಿದಾಗ ‘ಪುಣ್ಯವಂತರ ಸ್ನಾನ’ ಎಂದುತ್ತರಿಸಿದ.
ಆದರೂ ಗಂಗೆಗೆ ಸಮಾಧಾನವಾಗಲಿಲ್ಲ. ‘‘ನನ್ನ ರಭಸಕ್ಕೆ ಭೂಮಿಯೇ ಕೊಚ್ಚಿ ಹೋಗಬಹುದು. ನನ್ನ ವೇಗವನ್ನು ತಡೆಯಲು ಸಮರ್ಥನಾದ ಶಿವನನ್ನು ತಪಸ್ಸು ಮಾಡಿ ಒಲಿಸಿಕೋ. ಅವನು ಜಟೆಯಲ್ಲಿ ನನ್ನನ್ನು ಧರಿಸಿದರೆ ನಿಧಾನವಾಗಿ ಭೂಮಿಗಿಳಿದು ನಿನ್ನ ಬಂಧುಗಳಿಗೆ ಮೋಕ್ಷ ನೀಡುತ್ತೇನೆ’’ ಎಂದಳು.
ಛಲ ಬಿಡದ ಭಗೀರಥ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ. ಆಕಾಶದಿಂದ ಧುಮುಕಿದ ಗಂಗೆಯನ್ನು ಶಿವನು ಭೂಮಿಯಲ್ಲಿ ನಿಂತು ತನ್ನ ಜಟೆಯಲ್ಲಿ ಧರಿಸಿದ. ಆದರೂ ಗಂಗೆ ನೆಲಕ್ಕಿಳಿದ ರಭಸಕ್ಕೆ ಜಹ್ನು ಋಷಿಯ ಆಶ್ರಮ ಕೊಚ್ಚಿ ಹೋಯಿತು. ಶಕ್ತಿಶಾಲಿಯಾದ ಋಷಿಯು ಗಂಗೆಯನ್ನೆತ್ತಿ ಪೂರ್ಣವಾಗಿ ಕುಡಿದುಬಿಟ್ಟ.

ಭಗೀರಥನ ಪ್ರಾರ್ಥನೆಯಂತೆ ಅವನು ಕಿವಿಗಳ ಮೂಲಕ ಗಂಗೆಯನ್ನು ಹೊರ ಚೆಲ್ಲಿದಾಗ, ಗಂಗೆಗೆ ‘ಜಾಹ್ನವಿ’ ಎಂಬ ಹೆಸರಾಯಿತು. ಗಂಗೆ ಪಾತಾಳಲೋಕಕ್ಕೆ ಹರಿದು ಸಗರ ಪುತ್ರರ ದೇಹದ ಬೂದಿಯನ್ನು ತೊಳೆದು ಮೋಕ್ಷಕ್ಕೆ ಕಾರಣಳಾದಳು. ಸಗರನ ಮಕ್ಕಳು ನಿರ್ಮಿಸಿದ ಸುರಂಗದಲ್ಲಿ ನಿಂತ ನೀರಿನಿಂದಾಗಿ ಅದಕ್ಕೆ ಸಾಗರವೆಂಬ ಹೆಸರು ಬಂತು. ಕಠಿಣ ಪ್ರಯತ್ನದಿಂದ ಸಾಧನೆ ಮಾಡುವುದಕ್ಕೆ ಭಗೀರಥ ಪ್ರಯತ್ನವೆಂಬ ಹೆಸರಾದುದು ಈ ಕಾರಣದಿಂದಲೇ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s