ಬಂಗಾರದಂಥಹ ಬೆಳೆ ಈ ಬಾಳೆ ಬೆಳೆ

ಬಾಳೆಹಣ್ಣು ಆರೋಗ್ಯಕ್ಕೆ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಷ್ಟೇ ಅಲ್ಲದೇ ಔಷಧಕ್ಕೂ ಬಳಸುತ್ತಾರೆನ್ನುವುದು ಎಲ್ಲರಿಗೂ ಗೊತ್ತು. ಬಾಳೆ ಗಿಡದ ಬೇರೊಂದು ಬಿಟ್ಟು ಮಿಕ್ಕಿದ್ದೆಲ್ಲಾ ಉಪಯೋಗಕ್ಕೆ ಬರುತ್ತೆ, ಚಿಕ್ಕ ಬಾಳೆ ಗಿಡ ಪೂಜಾಲಂಕಾರಕ್ಕೆ, ಬಾಳೆ ಕಾಂಡ ಅಡುಗೆಗೆ, ಔಷಧಕ್ಕೆ, ಪೂಜಾಲಂಕಾರಕ್ಕೆ ಉಪಯೋಗವಾಗುತ್ತೆ. ಬಾಳೆ ಎಲೆ ಊಟದ ಸ್ಥಾನಮಾನವೇ ಬೇರೆ. ಬಾಳೆ ಹೂವಿನಿಂದಲೂ ಅಡುಗೆ ಮಾಡ್ತಾರೆ. ಬಾಳೆ ಕಾಯಿ, ಹಣ್ಣು ಮತ್ತದರ ಸಿಪ್ಪೆ. ಎಲ್ಲ ಅಂದ್ರೆ ಎಲ್ಲ, ಉಪಯುಕ್ತವೇ. ಸ್ವಲ್ಪ ಹೆಚ್ಚು ಕಡಿಮೆ ಈ ವಿಷಯ ಬಹುತೇಕರಿಗೆ ಗೊತ್ತು. ಇಂಥಹ ಬಾಳೆಯ ಬೆಳೆಯ ವಿಧಾನ ಹೇಗಿರುತ್ತೆ ? ಯಾವ ವಿಧಾನದಲ್ಲಿ, ಯಾವ ಯಾವ ಸೀಸನ್ನಿಗೆ, ಯಾವ ತಳಿಯ, ಅಧಿಕ ಬೆಳೆ ಬೆಳೆಯೋದು ಹೇಗೆ ? ಬಾಳೆ ಬೆಳೆಗೆ ಸಾಮಾನ್ಯವಾಗಿ ಬರುವ ರೋಗಗಳು ಯಾವುವು ? ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳೇನು ? ಇಂಥಹ ಸವಿವರವಾದ ಲೇಖನವನ್ನು ಇಲ್ಲಿ ನೀಡಲಾಗಿದೆ.

ಬಾಳೆ, ಅತ್ಯುತ್ತಮ ಪೌಷ್ಠಿಕಾಂಶಯುಕ್ತ ಒಂದು ಹಣ್ಣು.  ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮವಾದ ಬೇಡಿಕೆಯಿದೆ. ಸಾಂಪ್ರದಾಯಿಕವಾಗಿ ಬೆಳೆದ ಬಾಳೆಗಿಂತ ಅಂಗಾಂಶ ಕೃಷಿ ಬಾಳೆ ಬೇಸಾಯ ಹೆಚ್ಚು ಲಾಭದಾಯಕವೆಂಬುದು ಈಗಾಗಲೇ ರುಜುವಾತಾಗಿದೆ.

ಉತ್ತಮ ಗುಣಮಟ್ಟದ ಬಾಳೆಯ ಉತ್ಪಾದನೆಗಾಗಿ 6 /6 ಅಡಿ ಅಂತರದಲ್ಲಿ ನಾಟಿ ಮಾಡುವುದು. ಈ ಪದ್ಧತಿಯಲ್ಲಿ ಪ್ರತಿ ಎಕರೆಗೆ 1200 ಸಸಿಗಳು ಬೇಕಾಗುತ್ತವೆ. ಸರಬರಾಜು ಮಾಡಿದ ಸಸಿಗಳನ್ನು ಮರದ ಅಡಿಯಲ್ಲಿ ಅಥವಾ ಚಪ್ಪರದ ನೆರಳಿನಲ್ಲಿ ಶೇಖರಿಸಿ ಪ್ರತಿ ದಿನಕ್ಕೆ ಎರಡು ಬಾರಿ ನೀರು ಕೊಡುವುದು ಮತ್ತು 8-10 ದಿನಗಳ ಒಳಗಾಗಿ ನಾಟಿ ಮಾಡುವುದು.

ಗೊಬ್ಬರ ಶಿಫಾರಸ್ಸುಗಳು ಸಾಮಾನ್ಯ ಮಣ್ಣಿನ ಗುಣಕ್ಕೆ ಅನುಗುಣವಾಗಿರುತ್ತದೆ. ರೈತರು ತಮ್ಮ ಮಣ್ಣು ಮತ್ತು ಹವಾಗುಣಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳತಕ್ಕದ್ದು. ಗಾಳಿಯಿಂದಾಗುವ ಹಾನಿಯನ್ನು ತಡೆಗಟ್ಟಲು ರೈತರು ತಮ್ಮ ತೋಟದ ಸುತ್ತಲು ಅಗಸೆ(ಛಡಿ) ಸಸಿಗಳನ್ನು ಒತ್ತಾಗಿ ಬೆಳೆಸುವುದರಿಂದ ತಡೆಗಟ್ಟಬಹುದು.

ತಾಯಿ ಬಾಳೆ ಗಿಡದ ಪಕ್ಕದಲ್ಲಿ ಬರುವ ಮರಿ ಕಂದುಗಳನ್ನು ಸಕಾಲದಲ್ಲಿ ಹರಿತವಾದ ಉಪಕರಣದಿಂದ ಕತ್ತರಿಸಿ ತೆಗೆಯ ತಕ್ಕದ್ದು. ಇದರಿಂದ ಪೋಷಕಾಂಶಗಳು ಪೋಲಾಗುವುದನ್ನು ತಡೆಗಟ್ಟಬಹುದು. ಬಾಳೆ ಬೆಳೆಯಲ್ಲಿ ಕಳೆಯ ನಿಯಂತ್ರಣ ಬಹು ಮುಖ್ಯ ಅಂಶವಾಗಿದ್ದು, ಕಳೆಯ ನಿಯಂತ್ರಣವಿಲ್ಲದಿದ್ದರೆ ಸಸಿಗಳ ಬೆಳವಣಿಗೆ ಕುಂಠಿತವಾಗುವುದಲ್ಲದೇ, ರೋಗ ಹರಡುವ ಸಂಭವ ಹೆಚ್ಚಿರುತ್ತದೆ.

ಬಾಳೆ ಬೆಳೆಯ ಇಳುವರಿಯು ಸಸಿಯ ಗುಣಮಟ್ಟದೊಂದಿಗೆ, ಮಣ್ಣು ಹಾಗೂ ನೀರಿನ ಗುಣಮಟ್ಟ, ಪೋಷಕಾಂಶಗಳ ನಿರ್ವಹಣೆ, ಕಳೆ ನಿರ್ವಹಣೆ, ರೋಗಗಳ ನಿರ್ವಹಣೆ ಮತ್ತು ಅನುಕೂಲಕರ ವಾತಾವರಣವನ್ನು ಅವಲಂಭಿಸಿರುತ್ತದೆ. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವುದರಿಂದ ಗಿಡಗಳಿಗೆ ಸಮಾನವಾಗಿ ನೀರು ಹಾಯಿಸಬಹುದಲ್ಲದೇ, ಗಿಡದ ಅವಶ್ಯಕತೆಗನುಗುಣವಾಗಿ ನೀರು ಕೊಡಬಹುದು. ಇದರಿಂದ ನೀರಿನ ಉಳಿತಾಯವಾಗುವುದಲ್ಲದೇ, ಕಳೆಗಳ ಬೆಳವಣಿಗೆ ಕಡಿಮೆಯಿರುತ್ತದೆ. ಸಾಮಾನ್ಯವಾಗಿ ಮಣ್ಣಿನ ಗುಣ, ಗಿಡದ ವಯಸ್ಸು, ಹವಾಮಾನಗಳಿಗನುಸಾರವಾಗಿ ಪ್ರತಿ ಗಿಡಕ್ಕೆ, ದಿನವೊಂದಕ್ಕೆ 10 ಲೀ.ನಿಂದ (ಆರಂಭದಲ್ಲಿ)- 30 ಲೀ(ಹೂ ಬಿಡುವ ಸಮಯದಲ್ಲಿ) ನೀರು ಬೇಕಾಗುತ್ತದೆ. ರೈತರು ನೀರಿನ ಮತ್ತು ವಿದ್ಯುತ್‍ನ ಲಭ್ಯತೆಗನುಗುಣವಾಗಿ ನಾಟಿ ಮಾಡಬೇಕಾದ ವಿಸ್ತೀರ್ಣವನ್ನು ನಿರ್ಧರಿಸಿಕೊಳ್ಳತಕ್ಕದ್ದು.

ಅಗತ್ಯಕ್ಕಿಂತ ಹೆಚ್ಚು ನೀರು ಕೊಡುವುದರಿಂದ ಸಸಿಗಳು ಸಾಯುವ ಸಂಭವ ಹೆಚ್ಚಿರುತ್ತದೆ. ಸಸಿಗಳು ಹೂ ಬಿಟ್ಟ ನಂತರ ಕೊನೆಯಲ್ಲಿ ಬರುವ ಗಂಡು ಹೂಗಳನ್ನು ಮುರಿದು ತೆಗೆದು ಆಧಾರಕ್ಕಾಗಿ ಕೋಲುಗಳನ್ನು ನೀಡುವುದು. 4 ತಿಂಗಳ ನಂತರ ಗಳೆ ಅಥವಾ ಕುಂಟೆ ಹೊಡೆಯುವುದರಿಂದ ಬೇರುಗಳಿಗೆ ಹಾನಿಯಾಗುವ ಸಂಭವವಿರುವುದರಿಂದ ಇದನ್ನು 4 ತಿಂಗಳ ನಂತರ ನಿಲ್ಲಿಸುವುದು ಸೂಕ್ತ.

ಬಾಳೆ ಮಧ್ಯೆ ಅಂತರ ಬೆಳೆಗಳಿಂದ ಬಾಳೆಯ ಇಳುವರಿ ಕುಂಠಿತವಾಗುವುದಲ್ಲದೇ, ಬಾಳೆ ಬೆಳೆಯು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ರವರನ್ನು 7829512236 ಮೂಲಕ ಸಂಪರ್ಕಿಸಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s