ಚಲನಚಿತ್ರ:ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರ ಪರಿಚಯ

ರಾಜ್ಯ ಸರ್ಕಾರ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಜೀವಿತಾವಧಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈ ಬಾರಿಯೂ ಚಲನಚಿತ್ರ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗಗಳ ಸಾಧಕರಿಗೆ  ಪ್ರಶಸ್ತಿ ಪ್ರಕಟಿಸಿದೆ. ನಟನೆ ವಿಭಾಗದಲ್ಲಿ ಜೀವಿತಾವಧಿ ಸಾಧನೆ ಮಾಡಿದವರಿಗೆ  ಡಾ. ರಾಜ್ ಕುಮಾರ್ ಪ್ರಶಸ್ತಿ, ನಿರ್ದೇಶನ ವಿಭಾಗದಲ್ಲಿ ಜೀವಮಾನ ಸಾಧನೆಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ , ಮತ್ತು ಸಿನಿಮಾ ಪ್ರಚಾರ ವಿಭಾಗದ ಜೀವಮಾನ ಸಾಧನೆಗೆ  ಡಾ.ವಿಷ್ಟುವರ್ಧನ್ ಪ್ರಶಸ್ತಿಯನ್ನು ನೀಡಲಾಗುತ್ತದೆ.  ಈ ವರ್ಷದ ಪ್ರಕಟಗೊಂಡ ಪ್ರಶಸ್ತಿ ಪುರಸ್ಕೃತರ ವಿವರಗಳು ಈ ರೀತಿ ಇದೆ.

ಕರ್ನಾಟಕ ಸರ್ಕಾರ  ಚಲನಚಿತ್ರ ಕ್ಷೇತ್ರದ ಜೀವಿತಾವಧಿ ಸಾಧನೆಯ ಪ್ರಶಸ್ತಿಗೆ, ಹಿರಿಯ ನಟಿ ಆದವಾನಿ ಲಕ್ಷ್ಮೀದೇವಿ (ಡಾ. ರಾಜ್ ಕುಮಾರ್ ಪ್ರಶಸ್ತಿ), ನಿರ್ದೇಶಕ ಕೆ.ವಿ. ರಾಜು (ಪುಟ್ಟಣ್ಣ ಕಣಗಾಲ್ ಪ್ರಶಸ್ತಿ) ಹಾಗೂ ಕೆ. ಚಿನ್ನಪ್ಪ (ಡಾ. ವಿಷ್ಣುವರ್ಧನ್ ಪ್ರಶಸ್ತಿ) ಅವರುಗಳಿಗೆ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಶಸ್ತಿಗಳ ಆಯ್ಕೆಗಾಗಿ ಹಿರಿಯ ನಟಿ ಜಯಂತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಪ್ರಶಸ್ತಿಗಳು ತಲಾ 2 ಲಕ್ಷ ರೂ. ನಗದು ಬಹುಮಾನ ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ.

ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನೆನಪಿನ ‘ಮುತ್ತಿನಹಾರ ‘ಪುಸ್ತಕ (ಪ್ರಕಾಶಕರು: ಅಂಕಿತ ಪುಸ್ತಕ) ಆಯ್ಕೆಯಾಗಿದೆ. ಲೇಖಕ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕ ನೀಡಲಾಗುವುದು. ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಬೆಂಗಳೂರಿನ ಬಾನ್ ಬಯಲು ಚಿತ್ರ ಸಂಸ್ಥೆಯ ನಿರ್ಮಾಣದ “ಅನಲ” ಕಿರುಚಿತ್ರವು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ಮಾಪಕರಿಗೆ  50 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಚಲನಚಿತ್ರ ಕ್ಷೇತ್ರದ ಜೀವಿತಾವಧಿ ಸಾಧನೆಗಾಗಿ ಪ್ರಶಸ್ತಿ ಪಡೆದವರ ಪರಿಚಯ  ಇಲ್ಲಿದೆ.

ಆದವಾನಿ ಲಕ್ಷ್ಮೀದೇವಿ (ಹಿರಿಯ ನಟಿ)

ಕನ್ನಡ ಚಿತ್ರರಂಗದ ಹಿರಿಯ ಚಲನಚಿತ್ರ ಕಲಾವಿದೆಯಾದ ಆದವಾನಿ ಲಕ್ಷ್ಮಿದೇವಿಯವರು ಬಳ್ಳಾರಿ ಜಿಲ್ಲೆಯ ಅದವಾನಿಯವರು. ಹೀಗಾಗಿ ಇವರ ಹೆಸರಿನ ಜೊತೆ ಅದವಾನಿ ಊರಿನ ಹೆಸರು ಅಂಟಿಕೊಂಡು ಬಂದಿದೆ. ಇವರು ಏಳನೆಯ ವಯಸ್ಸಿಗೇ ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಕಾಲಿಟ್ಟರು. ಮೊದಲಿಗೆ ಅದವಾನಿಯ ಹವ್ಯಾಸ ರಂಗಭೂಮಿಯಲ್ಲಿ  ನಂತರ ಗುಬ್ಬಿ ಕಂಪನಿಯಲ್ಲಿ ಅಭಿನಯಿಸಿ ಅನುಭವ ಗಳಿಸಿದರು.

ನಂತರ 1956 ರಲ್ಲಿ ಡಾ.ರಾಜ್ ಕುಮಾರ್ ರವರ ಜೊತೆ “ಭಕ್ತ ವಿಜಯ” ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದರು. ನಂತರ ‘ಶುಕ್ರದೆಸೆ’ ‘ಮನೆತುಂಬಿದ ಹೆಣ್ಣು’ , ‘ಮಂಗಳಸೂತ್ರ’, ‘ದಶಾವತಾರ’, ‘ಕಲಿತರೂ ಹೆಣ್ಣೆ’, ‘ಶ್ರೀ ರಾಮಾಂಜನೇಯ ಯುದ್ಧ’, ‘ವೀರಸಂಕಲ್ಪ’ ಚಿತ್ರಗಳಲ್ಲಿ ರಾಜ್ ಮತ್ತು ಇತರರಿಗೆ ನಾಯಕಿಯಾಗಿ ಅಭಿನಯಿಸಿ, ಅಪಾರ ಜನಪ್ರಿಯತೆ ಗಳಿಸಿದರು,  ‘ತೇಜಸ್ವಿನಿ’ ‘ಚಂದವಳ್ಳಿಯ ತೋಟ’, ‘ಕರುಣೆಯೇ ಕುಟುಂಬದ ಕಣ್ಣು’, ಚಿತ್ರಗಳಲ್ಲಿ ಉಪ ನಾಯಕಿಯಾಗಿ ನಟಿಸಿದರು.

ರಾಜ್ ಅವರೊಂದಿಗೆ ಮೂವತ್ತೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ನಂತರ ತಾಯಿ, ಅತ್ತೆ, ಅತ್ತಿಗೆ ಮುಂತಾದ ವೈವಿದ್ಯಮಯ ಪೋಷಕ ಪಾತ್ರಗಳಲ್ಲಿ 60-70ರ ದಶಕದ ಜನಪ್ರಿಯ ಕಲಾವಿದೆಯೆನಿಸಿದರು.  150ಕ್ಕೂ  ಹೆಚ್ಚು ಕನ್ನಡ ಹಾಗೂ 15ಕ್ಕೂ ಹೆಚ್ಚು ತೆಲಗು, ಎರಡು ತಮಿಳು ಚಲನಚಿತ್ರಚಿತ್ರಗಳಲ್ಲಿ ಇವರ ಪ್ರತಿಭೆ ಶೋಭಿಸಿದೆ. ಇವರ “ಗಂಧದ ಗುಡಿ” ಚಿತ್ರದಲ್ಲಿನ ಮಮತಾಮಯಿ ತಾಯಿಯ ಪಾತ್ರಕ್ಕೆ ರಾಜ್ಯ ಸರ್ಕಾರದ ಪೋಷಕ ನಟಿ ಪ್ರಶಸ್ತಿ ಬಂದಿದೆ.

 

 ಕೆ.ವಿ.ರಾಜು, (ಚಲನಚಿತ್ರ ನಿರ್ದೇಶಕರು )

ಚಿತ್ರಸಾಹಿತಿ ಹಾಗೂ ನಿರ್ದೇಶಕ ಕೆ.ವಿ.ರಾಜು ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಕಲನ ಕಲಿಯುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಹ ನಿರ್ದೇಶನ ಹಾಗೂ ಚಿತ್ರ ಸಾಹಿತ್ಯ ರಚನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.  1979 ರಲ್ಲಿ ತಮ್ಮ ಅಣ್ಣ ಕೆ.ವಿ.ಜಯರಾಂ ರವರ ನಿರ್ದೇಶನದ ಮೊದಲ ಚಿತ್ರ “ಮರಳು ಸರಪಳಿ” ಚಿತ್ರದಲ್ಲಿ  ಸಹಾಯಕ ನಿರ್ದೇಶಕರಾದರು.  ಈವರೆಗೆ  38 ಚಲನಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು ಚಲನಚಿತ್ರದಲ್ಲಿ ತಾಂತ್ರಿಕತೆ ಮತ್ತು ಪದವೈಭವಕ್ಕೆ ಒತ್ತು ನೀಡಿ ಗಮನ ಸೆಳೆದಿದ್ದಾರೆ.

ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ರಚಿಸಿದ್ದಾರೆ. ಕೆ.ವಿ.ಜಯರಾಂ ನಿರ್ದೇಶನದ ‘ಮರಳುಸರಪಳಿ’, ‘ಬಾಡದ ಹೂವು’, ‘ಇಬ್ಬನಿ ಕರಗಿತು’, ‘ಒಲವೇ ಬದುಕು’, ‘ಶ್ವೇತ ಗುಲಾಬಿ’, ‘ಹೊಸನೀರು’ ಈ ಎಲ್ಲ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣಾ ಕಾರಗಾಗಿ ಕೆಲಸ ನಿರ್ವಹಿಸಿದ್ದಾರೆ.  ‘ಸಂಕ್ರಾಂತಿ’, ‘ಸಾಂಗ್ಲಿಯಾನ’, ‘ ಸಿಬಿಐ ಶಂಕರ್’, ‘ಬ್ರಹ್ಮಾಸ್ತ್ರ’, ‘ಪೋಲಿಸ್ ಪವರ್’, ‘ಬೆತ್ತಲೆ ಸೇವೆ’ ಮೊದಲಾದುವು ಅವರ ಸಂಭಾಷಣೆ ಇರುವ ಚಿತ್ರಗಳು.

1987 ರಲ್ಲಿ ಬಿಡುಗಡೆಯಾದ “ಬಂಧಮುಕ್ತ” ಚಿತ್ರದ ನಿರ್ದೇಶಕರಾಗಿ ಅವರು ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಗುರುತಿಸಿಕೊಂಡರು.ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಎಲ್ಲವೂ ಅವರದ್ದೇ ಆಗಿತ್ತು. ನಂತರ ಅವರ ‘ಸಂಗ್ರಾಮ'(1987), ‘ನವಭಾರತ ‘(1988), ‘ಇಂದ್ರಜಿತ್’ (1989), ‘ಅಭಿಜಿತ್’, ‘ಯುದ್ಧಕಾಂಡ’, ‘ನವಭಾರತ’, ‘ಕದನ’, ‘ಸುಂದರಕಾಂಡ’, ‘ಬೆಳ್ಳಿಮೋಡಗಳು’, ‘ಬೆಳ್ಳಿಕಾಲುಂಗುರ’, ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು’, ‘ಯುದ್ಧ’, ‘ಹುಲಿಯಾ’, ‘ನಂ.1’, ಹೀಗೆ 38 ಚಿತ್ರಗಳ ನಿರ್ದೇಶಕರಾದರು. ಇವರ “ಹುಲಿಯಾ” ಚಿತ್ರ ಜೀವನದ ಅತ್ಯುತ್ತಮ ಚಲನಚಿತ್ರವೆಂದು ಖ್ಯಾತಿ ಪಡೆದಿದೆ. ಇವರು ತಮ್ಮ ಪ್ರತಿಭೆಯ ಮೂಲಕ  ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟು, ಅಮಿತಾಬ್ ಬಚ್ಚನ್ ಅಭಿನಯದ ಇಂದ್ರಜಿತ್ ಹಾಗೂ ಜಿತೇಂದ್ರ ಅಭಿನಯದ “ಉದಾರ್ ಕೆ ಜಿಂದಗಿ” ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕೆ.ಚಿನ್ನಪ್ಪ, (ಬ್ಯಾನರ್ ಕಲಾವಿದ )

ಕನ್ನಡ ಚಿತ್ರರಂಗದ ಕೇಂದ್ರ ಸ್ಥಳವಾದ ಗಾಂಧೀ ನಗರದಲ್ಲಿ ಕೆ. ಚಿನ್ನಪ್ಪನವರ ಹೆಸರು ಚಿರಪರಿಚಿತ. ಯಾವುದೇ ಸಿನಿಮಾಕ್ಕೆ ಕಟೌಟ್  ಬೇಕೆಂದರೆ ಎಲ್ಲರೂ ನೋಡುವುದು ಚಿನ್ನಪ್ಪನವರ ರಾಜ್ ಕಮಲ್ ಆರ್ಟ್ಸ್ ಕಡೆಗೆ. ಇದರ ಮಾಲೀಕರಾದ ಕೆ.ಚಿನ್ನಪ್ಪನವರಿಗೆ ಈಗ     81 ರ ಇಳಿ ವಯಸ್ಸು. ಈಗಲೂ ಸಹ ಸಿನಿಮಾಗಳ ಕಟೌಟ್ ನಿರ್ಮಾಣದಲ್ಲಿ ಇವರು ಕಾರ್ಯ ನಿರತರಾಗಿದ್ದಾರೆ.

ಕನಕಪುರ ಸಮೀಪದ ಕೋಡಳ್ಳಿಯ ಬೇಸಾಯ ಕುಟುಂಬದಲ್ಲಿ ಜನಿಸಿದ ಚಿನ್ನಪ್ಪನವರು ತಮ್ಮ ತಾತನವರಿಂದ ಚಿತ್ರಕಲೆ ಕಲಿತರು. ನಂತರ ಎಸ್.ಕೆ.ಸೀನು ಆರ್ಟ್ಸ್ ನಲ್ಲಿ ಬ್ಯಾನರ್ ಬರೆಯುವ ಕೆಲಸಕ್ಕೆ ಸೇರಿಕೊಂಡರು. ತಮ್ಮ ವಿಶೇಷ ಚಿತ್ರಕಲಾ ಶೈಲಿಯಿಂದ ಆರಂಭದಿಂದಲೇ ಅವರು ಚಿತ್ರರಂಗದಲ್ಲಿ ಗಮನ ಸೆಳೆದರು.  ರಾಜ್ ಕುಮಾರ್ ರವರ ಆರಂಭಿಕ ಚಿತ್ರ “ಬೇಡರ ಕಣ್ಣಪ್ಪ” ಚಿತ್ರಕ್ಕೂ ಸಹ ಇವರು ಬ್ಯಾನರ್ ಬರೆದಿದ್ದಾರೆ.

ಈವರೆಗೆ ಕನ್ನಡ , ತೆಲಗು, ತಮಿಳು, ಮಲೆಯಾಳಿ, ಹಿಂದಿ, ಇಂಗ್ಲಿಷ್ ಹೀಗೆ ಬಹುಭಾಷೆಯ ಸುಮಾರು 4500 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಇವರು ಬ್ಯಾನರ್, ಕಟೌಟ್ ನಿರ್ಮಿಸಿ ಕೊಟ್ಟಿದ್ದಾರೆ. ಇವರ ವೃತ್ತಿ ಜೀವನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿನಿಮಾ ಪ್ರಚಾರ ಸಂಬಂಧಿ ಚಿತ್ರಕೃತಿಗಳನ್ನು ರಚಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s