ಕುಡಿಯುವ ನೀರು ಪೂರೈಕೆಗೆ ತಲಾ 1.90ಕೋಟಿ:ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು. ಎಲ್ಲ ಜಿಲ್ಲೆಗಳ ಜಿಲ್ಲಾದಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಂದ ಪ್ರಗತಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕ್ರಮಗಳ ಕುರಿತು ಸೂಚನೆ ನೀಡಿದರು. ಬೆಳಿಗ್ಗೆ 10.30 ರಿಂದ ಸಂಜೆ 6ಗಂಟೆಯ ವರೆಗೆ ಅಧಿಕಾರಿಗಳಿಂದ ಮುಖ್ಯಮಂತ್ರಿಗಳು ಮಾಹಿತಿ ಪಡೆದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಆ ವಿವರ ಇಲ್ಲಿದೆ.

 

cmಯಾವುದೇ ಹಳ್ಳಿ, ವಾರ್ಡ್‍ನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಾರದು. ಒಂದು ವೇಳೆ ಸಮಸ್ಯೆ ಕಂಡು ಬಂದರೆ ಡಿಸಿ,ಸಿಇಒಗಳನ್ನು ಜವಾಬ್ದಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು. ಏಕೆಂದರೆ ಕುಡಿಯುವ ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

eಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ  ನಾಲ್ಕು ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ತುರ್ತಾಗಿ ಕುಡಿಯುವ ನೀರು ಒದಗಿಸಲು ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 1.90 ಕೋಟಿ ರೂ. ಬಿಡುಗಡೆಯಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನಾ ನಿಧಿಗೂ ತಲಾ 50 ಲಕ್ಷ ರೂ. ಒದಗಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ 90 ಕೋಟಿ ರೂ. ನೀಡಿದೆ. ನಮ್ಮ ಬಳಿ ಹಣ ಇದೆ ಎಂದು ಡಿಸಿಗಳೇ ಹೇಳಿದ್ದಾರೆ. ಪಿಡಿ ಅಕೌಂಟ್‍ನಲ್ಲಿ 272 ಕೋಟಿ ರೂ. ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಸಮಸ್ಯೆ ಎದುರಾಗುವ ಪ್ರಶ್ನೆಯೇ ಇಲ್ಲ.

c2016-17ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರು ಪೂರೈಕೆಗೆ 843.73 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೇ.90ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. ಇದಲ್ಲದೆ ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ 93, ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ನಿಧಿಯಿಂದ 59 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಲಭ್ಯ ಇರುವ ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದೆ. ಈ ವರೆಗೆ 607 ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ.

bಜಾನುವಾರುಗಳಿಗೆ ಮೇವು ಒದಗಿಸಲೂ ಅಗತ್ಯ ಕ್ರಮ ಕೈಗೊಂಡಿದೆ. ಮೇವು ಲಭ್ಯತೆ ಕುರಿತು ಹಳ್ಳಿ, ತಾಲೂಕು, ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಮೂರು ವಾರದಿಂದ 20 ವಾರಗಳಿಗೆ ಬೇಕಾಗುವಷ್ಟು ಮೇವು ಇದೆ. ಈ ವರೆಗೆ 384 ಮೇವು ಬ್ಯಾಂಕ್, 74 ಕಡೆಗಳಲ್ಲಿ ಗೋ ಶಾಲೆ ತೆರೆಯಲಾಗಿದೆ. ಮೇವು ಬೆಳೆಯಲು ರೈತರಿಗೆ 7 ಲಕ್ಷ ಮಿನಿ ಕಿಟ್‍ಗಳನ್ನು ಹಂಚಿದೆ. ಗೋ ಶಾಲೆಗಳಿಗೆ ಪಶು ವೈದ್ಯರು ಆಗಾಗ ಬೇಟಿ ಕೊಡಲು ಹೇಳಿದೆ.

ಮೇವು ವಿತರಣೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಈ ಕುರಿತು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2016-17ನೇ ಸಾಲಿನಲ್ಲಿ 9.15 ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡಿದ್ದು, 3,316 ಕೋಟಿ ರೂ. ವೆಚ್ಚವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮಕ್ಕಳಿಗೆ ಊಟ ವ್ಯವಸ್ಥೆ :

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರು ಜೊತೆಯಲ್ಲಿ ಮಕ್ಕಳನ್ನು ಕರೆ ತಂದರೆ ಅವರಿಗೆ ನೆರಳಿನ ವ್ಯವಸ್ಥೆ ಮಾಡಿಕೊಡಬೇಕು. ಕುಡಿಯುವ ನೀರು ಮತ್ತು ಊಟ ಕೊಡಬೇಕು. ವೈದ್ಯರು ಆಗಾಗ ಸ್ಥಳಕ್ಕೆ ಭೇಟಿ ಕೊಟ್ಟು ಅವರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೂಚಿಸಿದೆ.

ಕೂಲಿ ಕಾರ್ಮಿಕರು ಮಕ್ಕಳನ್ನು ಕರೆ ತಂದರೆ ಅವರು ಕೆಲಸ ಮಾಡುವ ಅವಧಿಯಲ್ಲಿ ನೆರಳು ಮಾಡಿಕೊಡಬೇಕು. ಕುಡಿಯುವ ನೀರು ಮತ್ತು ಆಹಾರ ನೀಡಬೇಕು ಎಂದು ಸೂಚಿಸಿದೆ. ವೈದ್ಯರೂ ಸ್ಥಳಕ್ಕೆ ಭೇಟಿ ನೀಡಿ ಆಗಾಗ ತಪಾಸಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

 

ಇನ್ ಪುಟ್ ಸಬ್ಸಿಡಿ :

 

aಇನ್‍ಪುಟ್ ಸಬ್ಸಿಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ನಾವು ಕೇಳಿದಷ್ಟು ಕೊಡಲಿಲ್ಲ. ನಿಯಮಾನುಸಾರ 4703 ಕೋಟಿ ರೂ. ಮಂಜೂರು ಮಾಡಬೇಕಿತ್ತು. ಆದರೆ ಸಿಕ್ಕಿದ್ದು 1685 ಕೋಟಿ ರೂ. ಮಾತ್ರ.

4.47 ಲಕ್ಷ ರೈತರಿಗೆ ಇಂದು 265 ಕೋಟಿ ರೂ.ಗಳ ಸಬ್ಸಿಡಿ ವಿತರಣೆ ಮಾಡಲಾಗಿದೆ. ಈ ಹಿಂದೆ 12.03 ಲಕ್ಷ ರೈತರಿಗೆ 671 ಕೋಟಿ ರೂ. ಕೊಟ್ಟಿತ್ತು. ಈ ವರೆಗೆ 936 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ 5.70 ಲಕ್ಷ ರೈತರಿಗೆ ಈ ತಿಂಗಳ ಅಂತ್ಯದ ವೇಳೆಗೆ ಸಬ್ಸಿಡಿ ನೀಡಲಾಗುವುದು. ಇದು ಮುಂಗಾರು ಹಂಗಾಮಿನ ಇನ್‍ಪುಟ್ ಸಬ್ಸಿಡಿ. ಇಷ್ಟು ವೇಗವಾಗಿ ಪರಿಹಾರವನ್ನು ದೇಶದ ಯಾವುದೇ ರಾಜ್ಯ ಕೊಟ್ಟಿಲ್ಲ. ಇದಕ್ಕಾಗಿಯೇ ಸರ್ಕಾರ ತಂತ್ರಾಂಶ ರೂಪಿಸಿದೆ.

ಬೀದರ್, ರಾಯಚೂರು, ಯಾದಗಿರಿ, ಬಾಗಲಕೋಟ, ಕಲಬುರ್ಗಿ ಮತ್ತು ಬಾಗಲಕೋಟ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು 117 ಕೋಟಿ ರೂ. ಬಂದಿದೆ. ತಾವು ಪ್ರವಾಹಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಬೀದರ್ ಜಿಲ್ಲೆಗೆ 50 ಮತ್ತು ಕಲಬುರ್ಗಿಗೆ 25 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಲಾಗಿತ್ತು. ತಿಂಗಳಾಂತ್ಯಕ್ಕೆ ಪರಿಹಾರದ ಹಣ ಸಂತ್ರಸ್ತರಿಗೆ ಸೇರಲಿದೆ.

ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ನಷ್ಟಕ್ಕೆ 3310 ಕೋಟಿ ರೂ.ಗಳ ನೆರವು ಒದಗಿಸುವಂತೆ ಕೇಂದ್ರವನ್ನು ಕೋರಿದೆ. ಹಣ ಬರಲಿದ್ದು, ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

 ಶುದ್ಧ ಕುಡಿಯುವ ನೀರಿನ ಘಟಕ:

ಕಾಯಿಲೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ನೀರು ಪೂರೈಸುವ ಮುನ್ನ ಪರೀಕ್ಷೆ ಮಾಡುವಂತೆ ಹೇಳಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ನೀರಿನ ಕೊರತೆ ಉಂಟಾದರೆ ಟ್ಯಾಂಕರ್ ಮೂಲಕ ಒದಗಿಸಲು ಸೂಚಿಸಿದೆ.

ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬದವರಿಗೆ ವಿಳಂಬ ಮಾಡದೆ ಪರಿಹಾರ ಒದಗಿಸಬೇಕು. ಐದು ಲಕ್ಷ ರೂ.ಗಳ ಪರಿಹಾರ ನೀಡುವುದರ ಜೊತೆಗೆ ಮೃತರ ಪತ್ನಿಗೆ ಎರಡು ಸಾವಿರ ರೂ.ಗಳ ಮಾಸಾಶನ ಮಂಜೂರು ಮಾಡಬೇಕು. ವೈದ್ಯ ಚಿಕಿತ್ಸಾ ವೆಚ್ಚ ಭರಿಸಬೇಕು. ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದೆ. ಮರಣೋತ್ತರ ಪರೀಕ್ಷಾ ವರದಿ ಬಂದಿಲ್ಲ ಎಂಬ ನೆಪ ಹೇಳಿ ಪರಿಹಾರ ವಿತರಣೆಯಲ್ಲಿ ನಿಧಾನ ಮಾಡಬಾರದು. ವರದಿ ಬಾರದೇ ಇದ್ದಲ್ಲಿ ಅಧಿಕಾರಿಗಳೇ ತರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೆರೆ ಸಂಜೀವಿನಿ:

ಕೆರೆ ಸಂಜೀವಿನಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಕೆರೆಗಳ ಅಭಿವೃದ್ಧಿ ಯೋಜನೆಯೂ ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಿದೆ. ಒಟ್ಟಾರೆ ನಮ್ಮ ಸರ್ಕಾರ ಬರಗಾಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸುತ್ತಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ, ಕೃಷ್ಣಬೈರೇಗೌಡ, ಎ. ಮಂಜು ಉಪಸ್ಥಿತರಿದ್ದರು.

Advertisements

One thought on “ಕುಡಿಯುವ ನೀರು ಪೂರೈಕೆಗೆ ತಲಾ 1.90ಕೋಟಿ:ಮುಖ್ಯಮಂತ್ರಿ ಸಿದ್ದರಾಮಯ್ಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s