ಮೈಸೂರಿನಲ್ಲಿ ಬರ ಪರಿಹಾರ ಚಟುವಟಿಕೆ ಚುರುಕು

ರಾಜ್ಯದಲ್ಲಿ ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲರೂ ನಿಮ್ಮ ನಿಮ್ಮ ಸ್ವಕ್ಷೇತ್ರಗಳತ್ತ ತೆರಳಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದಂತೆ ಸಚಿವರು ಕಾರ್ಯ ಪ್ರವೃತ್ತಾಗಿದ್ದಾರೆ. ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್ ಕೆ ಪಾಟೀಲ, ಕೆ ಆರ್ ರಮೇಶ್ ಕುಮಾರ್ ಈಗಾಗಲೇ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಭಾಗಿಯಾಗಿ ಜನಪರವಾಗಿ ಕಾಮಗಾರಿಗಳ ಕಾರ್ಯವೈಖರಿಯನ್ನು ಗಮನಿಸಿದ್ದಾರೆ. ಅದೇ ರೀತಿ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ || ಹೆಚ್ ಸಿ ಮಹದೇವಪ್ಪ ಅವರೂ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಆ ಸಭೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಜಿಲ್ಲೆಯಲ್ಲಿ 31 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇವುಗಳಲ್ಲಿ 14 ಪೂರ್ಣಗೊಂಡಿದೆ. 15 ಪ್ರಗತಿಯಲ್ಲಿದೆ ಹಾಗೂ 2 ಪ್ರಾರಂಭಿಕ ಹಂತದಲ್ಲಿದೆ ಪ್ರಗತಿಯಲ್ಲಿರುವ 15 ಕಾಮಗಾರಿಗಳನ್ನು ಡಿಸೆಂಬರ್ 2017 ರೊಳಗಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ ಕಾಮಗಾರಿಗಳು ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜನಸಾಮಾನ್ಯರಿಗೆ ಕುಡಿಯುವ ನೀರು, ನರೆಗಾ ಯೋಜನೆಯಡಿ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನಲ್ಲಿ ಕೊರತೆ ಉಂಟಾಗದಂತೆ ನೋಡಿಕೊಂಡು ಉತ್ತಮ ರೀತಿಯಲ್ಲಿ ಬರ ಪರಿಸ್ಥಿತಿಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ ಇಲಾಖೆಯಿಂದ ಅವಧಿ ಮುಗಿದಿರುವ ಬಿತ್ತನೆ ಬೀಜ ವಿತರಣೆಯ ಬಗ್ಗೆ ಪತ್ರಿಕಾ ವರದಿಗಳಿಂದ ತಿಳಿದುಬಂದಿತ್ತು. ಈ ರೀತಿ ವಿತರಣೆಯಾದಲ್ಲಿ ರೈತರಿಗೆ ಇಲಾಖೆಯ ಮೇಲೆ ಯಾವ ರೀತಿಯ ಮನೋಭಾವ ಬೆಳೆಯುತ್ತದೆ ಎಂಬುದನ್ನು ಚಿಂತಿಸಬೇಕು. ಈ ಬಗ್ಗೆ ಸಂಬಂಧಿಸಿದವರಿಗೆ ನೊಟೀಸ್ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಯಾವುದೇ ಮೂಲಗಳಿಂದ ನೀರು ದೊರಕದಿದ್ದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳಲ್ಲಿ ಫಲಕವನ್ನು ಅಳವಡಿಸಿ ಎಷ್ಟು ಟ್ರಿಪ್ ನೀರು ನೀಡಲಾಗುತ್ತಿದೆ ಹಾಗೂ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯನ್ನು ಅನಾವರಣಗೊಳಿಸಿ. ನೀರನ್ನು ಟ್ಯಾಂಕರ್ ಮೂಲಕ ತಲುಪಿಸಿದ ನಂತರ ಗ್ರಾಮದ ಸಾರ್ವಜನಿಕರಿಂದ ಸಹಿ ಪಡೆದುಕೊಳ್ಳಿ ಇದರಿಂದ ಪಾರದರ್ಶಕತೆಯನ್ನು ಹೆಚ್ಚಿಸಬಹುದು ಎಂದರು.

2017 ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು. ಇದಕ್ಕೂ ಮುನ್ನ ತಾಲ್ಲೂಕುವಾರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಜಗದೀಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s