ತಿಂಗಳೊಳಗೆ ನಿವೇಶನ ಹಂಚಿಕೆ : ಸಚಿವ ಕಾಗೋಡು ತಿಮ್ಮಪ್ಪ

ಕೊಡಗು ಜಿಲ್ಲೆಯ ಅಧಿಕಾರಿಗಳು ಇನ್ನು ಕಛೇರಿ ಸಮಯವನ್ನು ಹಾಗೆ ಸುಮ್ಮನೆ ಕಾಲ ಕಳೆಯುವಂತಿಲ್ಲ. ಯಾಕೆಂದರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟು, ಕೆಲಸ ಮುಗಿಸಿ ಇಲ್ಲಾಂದ್ರೆ ಪರಿಣಾಮ ಎದುರಿಸಿ ಎಂದು ಗುಡುಗಿದ್ದಾರೆ. ಸಚಿವರ ಖಡಕ್ ಎಚ್ಚರಿಕೆ ಕೇಳಿದ ಅಧಿಕಾರಿಗಳ ಎದೆ ಢವಗುಟ್ಟುತ್ತಿದೆ. ಜಿಲ್ಲೆಯ ಕಛೇರಿಗಳಲ್ಲಿ ಆಮೆಗತಿಯಲ್ಲಿ ಕೆಲಸ ಸಾಗುತ್ತಿವೆ ಎಂಬ ಸಾರ್ವಜನಿಕರ ದೂರು ಸಚಿವರಿಗೆ ತಲುಪಿದೆ. ಕಾರಣ ಸಚಿವರು ಈಗ ಅಧಿಕಾರಿಗಳ ಬೆವರಿಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ದೊಡ್ಡ ದೊಡ್ಡ ಪ್ಲಾಂಟೇಷನ್‌ದಾರರ ಲಿಸ್ಟ್ ಕೇಳಿರುವ ಸಚಿವರು ನಿವೇಶನ ಹಾಗೂ ವಸತಿ ರಹಿತ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ತುಂಬುತ್ತಿದ್ದಾರೆ. ಸಚಿವರು ನಡೆಸಿದ ಸಭೆಯಲ್ಲಿ ಯಾರೆಲ್ಲಾ ಇದ್ದರು, ಇನ್ನೂ ಏನೆಲ್ಲಾ ನಡೆಯಿತು ಎನ್ನುವ ಡೀಟೆಲ್ಸ್ ಇಲ್ಲಿದೆ ನೋಡಿ

ಕೊಡಗು ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳನ್ನು ಗುರ್ತಿಸಿ ಒಂದು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.

ಆಯಾಯ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತರಿಂದ ಅರ್ಜಿ ಪಡೆದು ನಿವೇಶನ ಹಂಚಿಕೆ ಮಾಡಲು ಮುಂದಾಗಬೇಕು. ಈ ಕೆಲಸ ಒಂದು ತಿಂಗಳೊಳಗೆ ಆಗಲೇಬೇಕು, ಇಲ್ಲದಿದ್ದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಗೋಡು ತಿಮ್ಮಪ್ಪ ಅವರು ಎಚ್ಚರಿಕೆ ನೀಡಿದರು.ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅಕ್ರಮ ಸಕ್ರಮ ಸಮಿತಿಯಲ್ಲಿ ಇಬ್ಬರು ಸದಸ್ಯರು ಹಾಜರಾದರೆ ಸಾಕು, ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸದಸ್ಯರು ಹಾಜರಾಗದಿದ್ದರೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವಂತೆ ತಹಶೀಲ್ದಾರರಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು.

ಅಕ್ರಮ ಸಕ್ರಮ ಯೋಜನೆಯಡಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಈ ತಾಲ್ಲೂಕಿಗೆ ಹೆಚ್ಚುವರಿ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತುಂಬಾ ವಿಳಂಭ ಮಾಡಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಕಂದಾಯ ಇಲಾಖೆಯ ಅರ್ಜಿಗಳು ವಿಳಂಭವಾಗದಂತೆ ನೋಡಿಕೊಳ್ಳುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಆದಿವಾಸಿಗಳ ಜನಸಂಖ್ಯೆ ಎಷ್ಟು, ಅರಣ್ಯ ಹಕ್ಕು ಕಾಯ್ದೆಯಡಿ ಎಷ್ಟು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ನಿವೇಶನ ಹಾಗೂ ಭೂಮಿ ಇಲ್ಲದ ಕುಟುಂಬಗಳು ಎಷ್ಟು? ಈ ಬಗ್ಗೆ ಕೂಡಲೇ ಮಾಹಿತಿಯ ಪಟ್ಟಿ ಒದಗಿಸುವಂತೆ ಸಚಿವರು ಸೂಚನೆ ನೀಡಿದರು. ಆದಿವಾಸಿಗಳ ಹೆಸರಿನಲ್ಲಿರುವ ಭೂಮಿಯನ್ನು ಆದಿವಾಸಿಗಳೇ ಉಳುಮೆ ಮಾಡಬೇಕು. ಕೃಷಿ ಚಟುವಟಿಕೆ ಕೈಗೊಳ್ಳಲು ಎತ್ತುಗಳ ಖರೀದಿಗೆ ಸಹಾಯಧನ ನೀಡಲಾಗುವುದು, ಹಾಗೆಯೇ ಉಳುಮೆಗೆ ತರಬೇತಿಯನ್ನೂ ಸಹ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ದೊಡ್ಡ ದೊಡ್ಡ ಪ್ಲಾಂಟೇಷನ್‌ದಾರರು ಇದ್ದು, ಇಂತವರನ್ನು ಗುರ್ತಿಸಿ ಮಾಹಿತಿಯ ಪಟ್ಟಿ ಕೊಡಿ, ಅವಕಾಶವಿದ್ದರೆ ಬಡವರಿಗೆ ಭೂಮಿ ಹಂಚಲು ಪ್ರಯತ್ನಿಸಲಾಗುವುದು ಎಂದರು.’ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಕಂದಾಯ ಭೂಮಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ ಅವರು ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿರಾಜಪೇಟೆ ತಾಲ್ಲೂಕಿಗೂ ಉಪ ಸಮಿತಿ ರಚಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.

ಸರ್ಕಾರ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ಸಾಕಷ್ಟು ಅನುದಾನ ನೀಡಿದೆ. ನಿವೇಶನ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಬಸವನಹಳ್ಳಿಯ ಜಾಗ ಮಕ್ಕಳ ಭವಿಷ್ಯಕ್ಕೂ ಉಜ್ವಲವಾಗಿದೆ. ರಾಜ್ಯ ಹೆದ್ದಾರಿ ಬಳಿ ಇರುವುದರಿಂದ ಪ್ರವಾಸೋದ್ಯಮದಿಂದ ಉದ್ಯೋಗವೂ ದೊರೆಯಲಿದೆ. ಅದನ್ನು ಬಿಟ್ಟು ಕಾಡಿನಲ್ಲಿಯೇ ಇರುತ್ತೇವೆ ಎಂದರೆ ಹೇಗೆ? ಬದಲಾವಣೆಗೆ ಹೊಂದಿಕೊಳ್ಳುವುದು ಬೇಡವೇ ಎಂದು ಕಾಗೋಡು ತಿಮ್ಮಪ್ಪ ಅವರು ಪ್ರತಿಕ್ರಿಯಿಸಿದರು.

ದಿಡ್ಡಳ್ಳಿಯ ನಿರಾಶ್ರಿತರು ಈಗಾಗಲೇ ಗುತಿಸಲಾಗಿರುವ ಜಾಗಕ್ಕೆ ಬರುತ್ತಾರೆಯೇ ಇಲ್ಲವೆ? ಎಂಬುದನ್ನು ಕಾದು ನೋಡುತ್ತೇವೆ. ಒಪ್ಪಿಕೊಂಡಲ್ಲಿ ಒಂದು ವಾರದೊಳಗೆ ಹಕ್ಕುಪತ್ರ ವಿತರಿಸಲಾಗುವುದು. ಈ ಸಂಬಂಧ ಇದೇ ೧೯ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಯಲಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಭೂ ದಾಖಲೆಗಳ ಉಪ ನಿರ್ದೇಶಕರು, ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.  ಕಂದಾಯ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಾರ್ವಜನಿಕ ಹಿತದೃಷ್ಟಿಯ ಹಲವು ಮನವಿಗಳಿಗೆ ಕೂಡಲೇ ಸ್ಪಂದಿಸುವಂತೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s