ಡಾ.ಅಂಬೇಡ್ಕರ್ ವಿಚಾರಗಳಿಗೆ ಸರ್ಕಾರ ಬದ್ಧ : ಸಚಿವ ವಿನಯ್ ಕುಲಕರ್ಣಿ

ಇಡೀ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 126 ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯ್ತು. ನಮ್ಮ ರಾಜ್ಯದಲ್ಲಂತೂ ವರ್ಷವಿಡೀ ‘ಭಾರತ ಭಾಗ್ಯ ವಿಧಾತ’ ಧ್ವನಿ ಬೆಳಕಿನ ವಿಶಿಷ್ಟ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಅಂಬೇಡ್ಕರ್ ವಿಚಾರ ಧಾರೆಗಳನ್ನು ತಲುಪಿಸುವಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶ್ರಮಿಸಿ, ಜನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದಲ್ಲಿ ಸಿಕ್ಕ ಸ್ಪಂದನೆ ಅಷ್ಟಿಷ್ಟಲ್ಲ. ಇದೇ ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಮೂಲಕ ಅಂಬೇಡ್ಕರ್ ಮೇಲಿನ ತಮ್ಮ ಅಭಿಮಾನವನ್ನು ತೋರಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಹುಬ್ಬಳ್ಳಿ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಭಾರತರತ್ನ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶದ ಸರ್ವಾಂಗೀಣ ಏಳ್ಗೆಗೆ ಅಗತ್ಯವಾಗಿದೆ. ಸಂವಿಧಾನದತ್ತವಾದ ಸೌಲಭ್ಯಗಳನ್ನು ಪಡೆದು ಮೇಲೆ ಬಂದ ಶೋಷಿತ ಸಮುದಾಯದ ಶಿಕ್ಷಿತರು, ಅಧಿಕಾರಿಗಳು ತಾವು ಬೆಳೆದು ಬಂದ ಹಾದಿಯನ್ನು ಮರೆಯಬಾರದು.ಇಂದಿಗೂ ಹಳ್ಳಿಗಳಲ್ಲಿ ಕಷ್ಟಗಳ ಮಧ್ಯೆಯೇ ಬದುಕುತ್ತಿರುವ ನಮ್ಮವರ ಏಳ್ಗೆಗೆ ಸಹಾಯ ಹಸ್ತ ಚಾಚಬೇಕು ಎಂದು ಹೇಳಿದರು.

ಡಾ.ಅಂಬೇಡ್ಕರ್ ಅವರಿಗೂ ನಮ್ಮ ನೆಲಕ್ಕೂ ನಂಟಿತ್ತು :

ಬುದ್ಧ,ಬಸವಣ್ಣನವರ ಸಾಮಾಜಿಕ ಸಮಾನತೆಯ ಕ್ರಾಂತಿಕಾರಕ ವಿಚಾರಗಳನ್ನು ಅರಿತುಕೊಂಡು ಅವರ ಹಾದಿಯಲ್ಲಿಯೇ ಸಾಗಿ ಆಧುನಿಕ ಭಾರತದಲ್ಲಿ ಮಹಾನ್ ಮಾನವತಾವಾದಿಯಾಗಿ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್ ಅವರು, ಇಡೀ ಜಗತ್ತೇ ಗೌರವಿಸುವ ನೇತಾರರಾಗಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರಗಳೊಂದಿಗೂ ಡಾ.ಅಂಬೇಡ್ಕರ್ ಅವರೊಂದಿಗೆ ಸಾಕಷ್ಟು ಒಡನಾಟವಿತ್ತು. ಅಂದಿನ ಮುಂಬೈ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಇಲ್ಲಿನ ಶಾಸಕ ಸರ್.ಸಿದ್ದಪ್ಪ ಕಂಬಳಿಯವರು ಡಾ.ಅಂಬೇಡ್ಕರ್ ಅವರಲ್ಲಿನ ಅಪಾರ ಪ್ರತಿಭೆ ಗುರುತಿಸಿ ಪ್ರಾಧ್ಯಾಪಕ ಹುದ್ದೆ ನೀಡಿದ್ದರು, ಮುಂದೆ ಅಂಬೇಡ್ಕರ್ ಅವರ ರಾಜಕೀಯ ಬೆಳವಣಿಗೆಗೂ ಕೂಡ ಕಂಬಳಿಯವರು ಒತ್ತಾಸೆಯಾಗಿ ನಿಂತಿದ್ದ ಇತಿಹಾಸವನ್ನು ನಾವೆಲ್ಲ ಅರಿಯಬೇಕು ಎಂದು ತಿಳಿಸಿದರು.

ಡಾ.ಅಂಬೇಡ್ಕರ್ ವಿಚಾರಗಳಿಗೆ ಸರ್ಕಾರ ಬದ್ಧ :

ಅಂಬೇಡ್ಕರ್‍ ಅವರ ವಿಚಾರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಬದ್ಧರಾಗಿದ್ದಾರೆ. ಅವರ 125 ನೇ ಜಯಂತಿ ಸಂದರ್ಭದಲ್ಲಿ ಸರಕಾರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಿದ್ಯಾರ್ಥಿಗಳಿಗೆ 125 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ. 2017-18 ನೇ ಸಾಲಿನ ಆಯವ್ಯಯದಲ್ಲಿ ಎಸ್‍ಸಿಪಿ ಟಿಎಸ್‍ಪಿ ಯೋಜನೆಗೆ 29 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಸರಕಾರ ಮೀಸಲಿಟ್ಟಿದೆ ಎಂದು ಸಚಿವ ಕುಲಕರ್ಣಿ ಹೇಳಿದರು.

ಸಾಧಕರಿಗೆ ಸನ್ಮಾನ :

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉಚಿತ ಲ್ಯಾಪ್‍ಟಾಪ್‍ಗಳನ್ನು ಸಚಿವರು ವಿತರಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ