ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಲು ರಾಜ್ಯ ಸರ್ಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯಲ್ಲಿ ಹೊಳೆ ನೀರನ್ನು ಶುದ್ಧೀಕರಿಸಿ ನಿಗದಿತ ಸಂಪರ್ಕ ಯೋಜನೆಗಳ ಮೂಲಕ ಗ್ರಾಮಗಳಿಗೆ ನೀರು ಒದಗಿಸಲಾಗುವುದು. ಇದೊಂದು ಮಹತ್ವದ ಯೋಜನೆಯಾಗಿದೆ, ಬರ ಇರುವ ಹಿನ್ನೆಲೆಯಲ್ಲಿ ಬಹುತೇಕ ಕಡೆ ಕುಡಿಯಲು ನೀರು ಸಿಗುತ್ತಿಲ್ಲ ಇಂತಹ ಸಂದಿಗ್ದ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಡಿಯುವ ನೀರಿನ ದಾಹವನ್ನು ಇಂಗಿಸಲಿದೆ.
ಈ ಯೋಜನೆಯ ಅನುಷ್ಠಾನದ ಕುರಿತು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಭೆಯ ವಿವರವಾದ ವರದಿ ಇಲ್ಲಿದೆ.
ಕೊಪ್ಪಳ ಜಿಲ್ಲೆ ತೀವ್ರ ಬರ ಪೀಡಿತ ಜಿಲ್ಲೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು. ಅಲ್ಲದೆ ಪೂರ್ಣಗೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆದ್ಯತೆ ನೀಡಬೇಕು ಎಂದು ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನೆಗಾಗಿ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ, ಶಿಫಾರಸು ಮಾಡುವ ಸಲುವಾಗಿ ಸರ್ಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಶೀಲನಾ ಸಮಿತಿಯನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ರಚಿಸಿದ್ದು, ಸಮಿತಿಯು ಕೊಪ್ಪಳ ಜಿಲ್ಲೆಯಿಂದಲೇ ಸಭೆಯನ್ನು ಕೈಗೊಳ್ಳುವ ಮೂಲಕ ತನ್ನ ಕಾರ್ಯವನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 17 ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿದ್ದು, ಈ ಪೈಕಿ 09 ಯೋಜನೆಗಳು ಪೂರ್ಣಗೊಂಡು, 139 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಉಳಿದಂತೆ ಇನ್ನೂ 08 ಯೋಜನೆಗಳು ಪೂರ್ಣಗೊಂಡು, ಜನರಿಗೆ ನೀರು ಪೂರೈಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ತೊಂದರೆಗೆ ಬಹುಗ್ರಾಮ ಯೋಜನೆಗಳು ಶಾಶ್ವತ ಪರಿಹಾರ ಕಲ್ಪಿಸುವಂತಹ ಯೋಜನೆಗಳಾಗಿರುವುದರಿಂದ, ಇಂತಹ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವತ್ತ ಅಧಿಕಾರಿಗಳು ಆದ್ಯತೆ ನೀಡಬೇಕಿದೆ. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ತೀವ್ರ ತರನಾದ ತೊಂದರೆಗಳಿದ್ದಲ್ಲಿ, ಅದನ್ನು ಸಮಿತಿಯ ಗಮನಕ್ಕೆ ತರಬೇಕು. ಸಮಿತಿಯು ಸಮಸ್ಯೆಯ ನಿವಾರಣೆಗೆ ಕ್ರಮ ಕೈಗೊಳ್ಳಲಿದೆ. ಅದೇ ರೀತಿ ಪೂರ್ಣಗೊಂಡ ಬಹುಗ್ರಾಮ ಯೋಜನೆಗಳ ನಿರ್ವಹಣೆಯ ಕಡೆಗೂ ಗಮನ ಹರಿಸಬೇಕಿದೆ. ಪೂರ್ಣಗೊಂಡ ಯೋಜನೆಗಳಲ್ಲಿ ಆಗಾಗ್ಗೆ ಸಣ್ಣ ಪುಟ್ಟ ತೊಂದರೆಗಳು ಕಂಡುಬರುತ್ತವೆ. ಯೋಜನೆಗಳನ್ನು ಹಸ್ತಾಂತರಿಸಿದ ಬಳಿಕ ಅದರ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡದಿದ್ದಲ್ಲಿ, ಇಡೀ ಯೋಜನೆಯೇ ನಿಂತುಹೋಗಿ, ಜನರು ನೀರಿನಿಂದ ವಂಚಿತರಾಗಬೇಕಾಗುತ್ತದೆ ಎಂದು ನಂಜಯ್ಯನಮಠ ಅವರು ತಿಳಿಸಿದರು.