ಬೇಲೂರು ಚನ್ನಕೇಶವ ದೇವಾಲಯದ ರಥೋತ್ಸವ ಏಪ್ರಿಲ್ 8ರಂದು ಅದ್ದೂರಿಯಾಗಿ ಜರುಗಿತು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ. ಮಂಜು ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಚಿವರ ಜೊತೆ ಶಾಸಕರು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಲ್ಪಕಲೆಯ ತಾಣ:
ಬೇಲೂರು ಚನ್ನಕೇಶವ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಯ ನಿರ್ವಹಣೆಗೆ ಒಳಪಟ್ಟಿದೆ.
ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿಯೂ ಸಹಾ ಈ ದೇಗುಲಕ್ಕೆ ಸ್ಥಾನವಿದೆ. ದೇಗುಲದ ಶಿಲ್ಪಕಲೆಯನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ.
ಹೊಯ್ಸಳರ ದೊರೆ ವಿಷ್ಣುವರ್ಧನ ಕಟ್ಟಿಸಿದ ಈ ದೇಗುಲವನ್ನು ಅಮರ ಶಿಲ್ಪಿ ಜಕಣಾಚಾರಿ ನಿರ್ಮಿಸಿದನೆಂಬ ಐತಿಹ್ಯವಿದೆ. ನಕ್ಷಾತ್ರಾಕಾರದಲ್ಲಿರುವ ಗರ್ಭಗುಡಿ, ರಾಮಾಯಣ-ಮಹಾಭಾರತದ ಕಥನವನ್ನು ಶಿಲ್ಪಕಲೆಯಲ್ಲಿ ಅಚ್ಚೊತ್ತಿಸಿರುವ ರೀತಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಮುಖ್ಯ ದೇಗುಲದ ಸುತ್ತಲೂ ಬೇರೆ ಬೇರೆ ದೇಗುಲಗಳನ್ನು ಸ್ಥಾಪಿಸಲಾಗಿದೆ. ದೇಗುಲದ ಪ್ರಾಂಗಣ ವಿಸ್ತಾರವಾಗಿದ್ದು ಅಲ್ಲಿಯೇ ಕೊಳ ಇದೆ.
ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲ ಸ್ವತ: ನೃತ್ಯಗಾತಿಯಾಗಿದ್ದುದರಿಂದ ಆಕೆಯ ಸ್ಮರಣೆಗಾಗಿ ದೇಗುಲವನ್ನು ನಿರ್ಮಿಸಲಾಯಿತೆಂಬ ಐತಿಹ್ಯವೂ ಇದೆ.
ದೇಗುಲದ ಸುತ್ತಲ ಪಾರ್ಶ್ವ ಗೋಡೆಗಳಲ್ಲಿ 800ಕ್ಕೂ ಹೆಚ್ಚು ಸಾಲ ಭಂಜಿಕೆಯರು, ಶಿಲಾಬಾಲಿಕೆಯರನ್ನು ಶಿಲ್ಪಕಲೆಯಲ್ಲಿ ಅಭಿವ್ಯಕ್ತಿಸಲಾಗಿದೆ.
ದೇಗುಲದಲ್ಲಿ ಹೊಯ್ಸಳರ ಮನೆ ದೇವರಾದ ಶ್ರೀ ಚನ್ನಕೇಶವ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ಜಾತ್ರೋತ್ಸವದ ಬೆರಗು:
ಮುಜುರಾಯಿ ಇಲಾಖೆಯ ಉಸ್ತುವಾರಿಯಲ್ಲಿ ಪ್ರತೀ ವರ್ಷ ದೇವಾಲಯದಲ್ಲಿ ಏಪ್ರಿಲ್ ಮಾಹೆಯಲ್ಲಿ ಜಾತ್ರೋತ್ಸವ ನಡೆಯುತ್ತದೆ.
ಜಾತ್ರೆಯ ನಂತರ ತಿಂಗಳ ಕಾಲ ದೇವರ ಸೇವಾ ಉತ್ಸವಗಳು ನಿರಂತರವಾಗಿ ಜರುಗುತ್ತವೆ.
ಈ ಸಂದರ್ಭದಲ್ಲಿ ದೇವರನ್ನು ಚಿನ್ನದ ಒಡವೆ ಆಭರಣಗಳಿಂದ ಸಿಂಗರಿಸಲಾಗಿರುತ್ತದೆ. ಆಕರ್ಷಕವಾದ ಉಡುಪುಗಳನ್ನು ಹೊದಿಸಲಾಗಿರುತ್ತದೆಯಲ್ಲದೇ, ದೇಗುಲದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ದೇಗುಲ ವೀಕ್ಷಿಸಲು ಬರುವ ಭಕ್ತರಿಗೆ ಬೇಸಿಗೆಯಲ್ಲಿ ಸುಡದಿರಲೆಂದು ಕಲ್ಲು ಹಾಸಿನ ಮೇಲೆ ನೆಲಹಾಸು ಹಾಕಲಾಗಿರುತ್ತದೆ, ಹಾಗೆಯೇ ಮದ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಸಹಾ ಮಾಡುತ್ತಾರೆ.
ಸಂಪರ್ಕ ವ್ಯವಸ್ಥೆ:
ಬೇಲೂರು ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಈ ಅವಧಿಯಲ್ಲಿ ಭೇಟಿ ನೀಡುವರು.
ಪ್ರವಾಸೋದ್ಯಮ ಇಲಾಖೆ ಸುಸಜ್ಜಿತ ಹೋಟೆಲ್ ಮತ್ತು ವಸತಿ ವ್ಯವಸ್ಥೆಯನ್ನು ವ್ಯವಸ್ಥೆಗೊಳಿಸಿದೆ.
ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬೇಲೂರು ತಲುಪ ಬಹುದು ಮತ್ತು ರೈಲಿನಲ್ಲಿ ಆಗಮಿಸುವವರು ಅರಸೀಕೆರೆ-ಹಾಸನಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬೇಲೂರಿಗೆ ಬರಬಹುದು.