ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾವು ಮೇಳ ಆಯೋಜನೆ : ಎಲ್. ಗೋಪಾಲಕೃಷ್ಣ

ಬೆಂಗಳೂರಿನಲ್ಲಿ ಮಾತ್ರ ಆಯೋಜಿಸಲಾಗುತ್ತಿರುವ ಮಾವು ಮೇಳವನ್ನು ಇದೀಗ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಹೇಳಿದರು.

ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಕೊಪ್ಪಳದ ಎ.ಆರ್. ಮೇಘರಾಜ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಆಯೋಜಿಸಲಾಗಿದ್ದ ಗುಣಮಟ್ಟದ ಮಾವು ಬೇಸಾಯ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಕುರಿತ ಒಂದು ದಿನದ ತಾಂತ್ರಿಕ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ವೈವಿಧ್ಯಮಯ ತಳಿಗಳ ರಸಭರಿತ ಮಾವು ಹಣ್ಣುಗಳನ್ನು ಜನರಿಗೆ ತಲುಪಿಸುವ ಮತ್ತು ರೈತರಿಗೆ ಉತ್ತೇಜನ ಕೊಡುವಂತಹ ಮಾವು ಮೇಳವನ್ನು ಈ ಮೊದಲು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು. ಬೆಂಗಳೂರಿನ ನೆರೆಹೊರೆಯ ಜಿಲ್ಲೆಗಳ ಮಾವು ಬೆಳೆಗಾರರು, ಮಾವು ಮೇಳದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಇತ್ತು. ಇದೀಗ ಬೆಂಗಳೂರಿನ ಆಯ್ದ 40 ಕಡೆಗಳಲ್ಲಿ ಮಾವು ಮೇಳವನ್ನು ಆಯೋಜಿಸಲು ನಿಗಮವು ಕ್ರಮ ಕೈಗೊಂಡಿದೆ. ಇದೇ ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮಾವು ಮೇಳವನ್ನು ಏರ್ಪಡಿಸಲು ನಿಗಮವು ನಿರ್ಧರಿಸಿದ್ದು, ಇದಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ತೋಟಗಾರಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾವು ಮೇಳದಲ್ಲಿ ಅಪಾಯಕಾರಿ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಉತ್ತಮ ಗುಣಮಟ್ಟದ ಮಾವು ಗ್ರಾಹಕರಿಗೆ ಲಭ್ಯವಾಗಬೇಕು. ರೈತರಿಗೆ ಲಾಭದಾಯಕವಾಗಬೇಕು ಎನ್ನುವ ಉದ್ದೇಶವನ್ನು ನಿಗಮವು ಹೊಂದಿದೆ. ಎಲ್ಲ ಜಿಲ್ಲೆಗಳಲ್ಲೂ ಮಾವು ಮೇಳ ಆಯೋಜಿಸುವುದರಿಂದ, ರಾಜ್ಯದ ಎಲ್ಲ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ವೈವಿಧ್ಯಮಯ ತಳಿಗಳ ಮಾವು ದೊರೆಯಲು ಸಾಧ್ಯವಾಗಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೂ ಆರ್ಥಿಕ ಬಲ ದೊರೆಯಲಿದೆ ಎಂದು ಹೇಳಿದರು.


ರಫ್ತು ಗುಣಮಟ್ಟದ ತಂತ್ರಜ್ಞಾನ ಪರಿಚಯ :
ಜಗತ್ತಿನಲ್ಲಿಯೇ ಭಾರತದ ಮಾವಿಗೆ ಉತ್ತಮ ಬೇಡಿಕೆ ಇದೆ. ಹೀಗಾಗಿ ವಿದೇಶಗಳಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಮಾತ್ರ ರಫ್ತು ಮಾಡಲು ಅವಕಾಶ ಇರುವುದರಿಂದ, ಉತ್ತಮ ಗುಣಮಟ್ಟದ ಹಣ್ಣುಗಳನ್ನು ಬೆಳೆಸಲು ಅನುಸರಿಸಬೇಕಾದ ತಂತ್ರಜ್ಞಾನ, ಮಾವು ಉಪಚಾರ ವಿಧಾನಗಳು, ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್ ಮುಂತಾದ ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಪರಿಚಯ ಮಾಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮವು ರಾಜ್ಯದ ಧಾರವಾಡ ಮತ್ತು ಬೆಂಗಳೂರಿನಲ್ಲಿ ರೈತರಿಗೆ ಮಾವು ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ವಹಿಸಿದೆ ಎಂದರು.
ಮಾವು ಅಭಿವೃದ್ಧಿ ನಿಗಮಕ್ಕೆ 42 ಕೋಟಿ ರೂ. :
ರಾಜ್ಯದಲ್ಲಿ ಮಾವು ಬೆಳೆಯನ್ನು ರೈತರಿಗೆ ಲಾಭದಾಯಕ ಉದ್ಯಮವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ವರ್ಷ ನಿಗಮಕ್ಕೆ 42 ಕೋಟಿ ರೂ. ಗಳ ಅನುದಾನವನ್ನು ಸರ್ಕಾರ ಒದಗಿಸಿದೆ. ಅಲ್ಲದೆ ತೋಟಗಾರಿಕೆ ಇಲಾಖೆ ಪುನಶ್ಚೇತನಕ್ಕಾಗಿಯೇ 10 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಕೃಷಿ ಭಾಗ್ಯ ಯೋಜನೆಯನ್ನು ಸರ್ಕಾರ ತೋಟಗಾರಿಕೆ ಇಲಾಖೆಗೂ ವಿಸ್ತರಿಸಿದ್ದು, ತೋಟಗಾರಿಕೆ ಬೆಳೆಗಾರರು ಕೂಡ ಕೃಷಿ ಹೊಂಡ ನಿರ್ಮಿಸಿ, ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸರ್ಕಾರ 200 ಕೋಟಿ ರೂ. ಅನುದಾನವನ್ನು ಪ್ರಸಕ್ತ ವರ್ಷಕ್ಕೆ ಒದಗಿಸಿದೆ ಎಂದರು.


ಪ್ಯಾಕ್ ಹೌಸ್‍ಗೆ 2.5 ಲಕ್ಷ ರೂ. ಸಹಾಯಧನ :
ಮಾವು ಬೆಳೆಗಾರರು ಕೊಯ್ಲೋತ್ತರದಲ್ಲಿ ನಷ್ಟ ಅನುಭವಿಸುವುದನ್ನು ತಪ್ಪಿಸುವ ಸಲುವಾಗಿ ಉತ್ತಮ ತಂತ್ರಜ್ಞಾನದಲ್ಲಿ ಮಾವು ಬೆಳೆಗಾರರು ತಮ್ಮ ತೋಟದಲ್ಲಿ 20/30 ಅಡಿ ಅಳತೆಯಲ್ಲಿ ಪ್ಯಾಕ್ ಹೌಸ್ ನಿರ್ಮಿಸಿಕೊಳ್ಳಲು ನಿಗಮದ ವತಿಯಿಂದ 2.5 ಲಕ್ಷ ರೂ. ಗಳ ಸಹಾಯಧನ ನೀಡುವ ಯೋಜನೆಯನ್ನು ನೀಡಲಾಗುತ್ತಿದೆ. ಮಾವು ಬೆಳೆಗೆ ಪ್ರಮುಖವಾಗಿ ಕಾಡುವ ರೋಗ ಅಥವಾ ಕೀಟಬಾಧೆಯನ್ನು ನಿಯಂತ್ರಿಸಲು ಸಬ್ಸಿಡಿ ದರದಲ್ಲಿ ಉತ್ತಮ ಕೀಟನಾಶಕ ಹಾಗೂ ಮೋಹಕ ಬಲೆಯನ್ನು ರೈತರಿಗೆ ನೀಡುವ ಯೋಜನೆಯನ್ನು ನಿಗಮವು ಜಾರಿಗೊಳಿಸಿದೆ. ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮಾವು ಸ್ಪೆಷಲ್’ ಪೋಷಕಾಂಶಗಳ ಮಿಶ್ರಣವನ್ನು ಕೂಡ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಮಾವಿನ ಗಿಡಗಳು 30 ರಿಂದ 40 ದಿನಗಳ ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿರುವ ಹೊಸ ತಂತ್ರಜ್ಞಾನದ ಜೆಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರಿಗೆ ಒದಗಿಸಲು ನಿಗಮವು ಕ್ರಮ ಕೈಗೊಳ್ಳಲಿದೆ. ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಉತ್ತಮ ಗುಣಮಟ್ಟದ ಮಾವು ಬೆಳೆಯಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s