ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಮಹತ್ವದ್ದಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸ್ವಾತಂತ್ರ್ಯ ನಂತರ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಬಂದ ನಂತರ ಇವತ್ತು ನಮ್ಮ ಸರ್ಕಾರ ತಂದಿರುವ ವಿಧೇಯಕ ಐತಿಹಾಸಿಕ ವಿಧೇಯಕವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಮಾತಿನಂತೆ ನಡೆದಿದೆ. ದಾಖಲೆಗಳಿಲ್ಲದೆಯೂ ಯಾರು ವಾಸ ಮಾಡುತ್ತಿದ್ದಾರೋ ಆ ವಸತಿಗೆ ಅವರೇ ಒಡೆಯರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ 2016 ಮಂಡನೆ ವೇಳೆ ಮುಖ್ಯಮಂತ್ರಿಗಳು ಸದನದಲ್ಲಿ ಮಾತನಾಡಿದರು.

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮ 2016 ತಿದ್ದುಪಡಿಯನ್ನು ತರಲು ಶಾಸಕ ಶಿವಮೂರ್ತಿ ಮತ್ತಿತರರು ಒತ್ತಾಯ ಹಾಕುತ್ತಲೇ ಇದ್ದರು, ಆಗ ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಾದ ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಎಂ.ಆರ್ ಹೆಗ್ಗಡೆ, ನಿವೃತ್ತ ಕೆಎಎಸ್ ಜಂಟಿ ನಿರ್ದೇಶಕ ಅನಂತರಾಮಯ್ಯ, ಕಾನೂನು ಸಚಿವರನ್ನೊಳಗೊಂಡ ಸಮಿತಿ ರಚಿಸಿ ವರದಿ ಪಡೆದು, ಹೈಕೋರ್ಟ್ ನ್ಯಾಯಾಧೀಶರ ಜೊತೆ ಚರ್ಚಿಸಿ, ವಾಸಮಾಡುತ್ತಿರುವವರೇ ವಾರಸುದಾರರಾಗುತ್ತಾರೆ ಎಂಬ ಕಾಯ್ದೆ ತರಲಾಗಿದೆ. ಇದೊಂದು ಅತ್ಯಂತ ಕ್ರಾಂತಿಕಾರಕ , ಪ್ರಗತಿದಾಯಕ ವಿಧೇಯಕವಾಗಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಅಧ್ಯಕ್ಷರು ಇಂತಹ ಉತ್ತಮ ಬಿಲ್ ಪಾಸ್ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಹಾಗೂ ಸದನದಲ್ಲಿ ವಿರೋಧ ಪಕ್ಷದ ನಾಯಕರು, ಸದಸ್ಯರು, ಜೆಡಿಎಸ್ ನಾಯಕರುಗಳು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ವಿಧಾನ ಸಭೆ ಅಧ್ಯಕ್ಷರಾದ ಕೋಳಿವಾಡ ಅವರು ಮಾತನಾಡಿ ಇಂತಹ ಒಂದು ಉತ್ತಮ ಬಿಲ್ ತಂದಂತಹ ದಿನ ತಾವು ಈ ಕುರ್ಚಿಯಲ್ಲಿ ಕುಳಿತು ವಾಸ ಮಾಡುವವನೇ ಆ ಮನೆಯ ಒಡೆಯ ಎನ್ನುವಂತಹ ಕಾಯ್ದೆ ಜಾರಿಯಾಗಿರುವುದು ನನ್ನ ಪುಣ್ಯ, ಇದಕ್ಕೆ ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಸದಸ್ಯರುಗಳಿಗೂ ನಾನು ವಂದಿಸುತ್ತೇನೆ ಎಂದರು.

ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ತರುವಾಗ ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಳ್ಳುತ್ತಾ, ಇವತ್ತು ಇದೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದೇವೆ. ಇಂತಹ ಸನ್ನಿವೇಶದಲ್ಲಿ ಇಲ್ಲಿ ನಾನಿರುವುದು ನಮ್ಮ ಪುಣ್ಯ, ಇದೊಂದು ಇತಿಹಾಸ ಸೃಷ್ಟಿಮಾಡಿರುವ ಕೆಲಸ ಎಂದರು.

ಸಚಿವ ಆಂಜನೇಯ ಸಚಿವ ಶಿವರಾಜ್ ತಂಗಡಗಿ ಮತ್ತಿತರ ಸಚಿವರು, ಶಾಸಕರುಗಳು ಅನೇಕ ತಳ ವರ್ಗದ ವಸತಿ ಹೀನ ಜನಾಂಗಕ್ಕೆ ಕಂದಾಯ ಗ್ರಾಮ, ಗ್ರಾಮ ಮಾನ್ಯತೆಯನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದೆ. ಇದು ಯುಗಾದಿಯ ಹೊಸವರ್ಷಕ್ಕೆ ಸರ್ಕಾರ ಕೊಟ್ಟ ಉಡುಗೊರೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂತಹ ಉತ್ತಮ ವಿಧೇಯಕವನ್ನು ತಂದಂತಹ ವಿಶೇಷವಾಗಿ ಆ ವರ್ಗದ ಜನರಿಗೆ ಕೊಟ್ಟಂತಹ ಹಕ್ಕಿಗಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದರು.

ವಿಧೇಯಕ ಅಂಗೀಕಾರ:

ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ 1961ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವೆಂದು ಸದನದಲ್ಲಿ ವಿಧೇಯಕವನ್ನು ಮಂಡಿಸಲಾಯಿತು. ಸದನ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ನಂತರ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮ 2016 ವನ್ನು ಜಾರಿಗೆ ತರಲಾಯಿತು.

ಕಾಯ್ದೆ ಪ್ರಕಾರ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿಗಳಂಥ ದಾಖಲಿಸಿಲ್ಲದ ಜನವಸತಿಗಳಲ್ಲಿ ವಾಸಿಸುತ್ತಿರುವ ವಾಸದ ಮನೆಗಳನ್ನು ಇರುವ ನಿವೇಶನದ ಸಹಿತವಾಗಿ ಎಲ್ಲಾ ಉಪಾಧಿಗಳಿಂದ ಮುಕ್ತವಾಗಿ ರಾಜ್ಯ ಸರ್ಕಾರದಲ್ಲಿ ನಿರುಪಾಧಿಕವಾಗಿ ನಿಹಿತಗೊಳ್ಳತಕ್ಕದ್ದು ಎಂದು ತಿದ್ದುಪಡಿ ತರಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s