ಭಾರತದ ಸಂವಿಧಾನ ದೇಶದ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಕೊಟ್ಟಿರುವ ರೀತಿಯಲ್ಲಿಯೇ, ಮೂಲಭೂತ ಕರ್ತವ್ಯಗಳನ್ನೂ ಸಹ ನೀಡಿದೆ. ಇಂತಹ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯರ ಹೊಣೆಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರದಂದು ಏರ್ಪಡಿಸಿದ ‘ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲಭೂತ ಹಕ್ಕುಗಳನ್ನು ಪಡೆಯಲು ಆಸಕ್ತಿ ವಹಿಸುವ ನಾವು, ಮೂಲಭೂತ ಕರ್ತವ್ಯಗಳ ಪಾಲನೆಯ ವಿಷಯ ಬಂದಾಗ, ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿ ಮನೋಭಾವ ವ್ಯಕ್ತಪಡಿಸುವುದು ಸಮಂಜಸವಲ್ಲ. ಮೂಲಭೂತ ಕರ್ತವ್ಯಗಳನ್ನು ಯಾರು ಗೌರವಿಸುತ್ತಾರೆಯೋ ಅವರನ್ನು ನ್ಯಾಯಾಲಯವೂ ಗೌರವಿಸುತ್ತದೆ.ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಒಂದನ್ನು ಹೊರತುಪಡಿಸಿ ಇನ್ನೊಂದಿಲ್ಲ. ದೇಶಕ್ಕೆ ನಿಷ್ಠರಾಗಿ ಇರುವುದು, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು, ಅವಶ್ಯಕತೆ ಬಿದ್ದಾಗ, ದೇಶಕ್ಕಾಗಿ ಯಾವುದೇ ಸೇವೆಗೆ ಅಣಿಯಾಗುವುದು, ಎಲ್ಲರೊಂದಿಗೆ ಸಾಮರಸ್ಯ ಕಾಪಾಡಿಕೊಳ್ಳುವುದು, ದೇಶಕ್ಕಾಗಿ ದುಡಿದವರನ್ನು ಗೌರವಿಸುವುದು, ಹೀಗೆ ಅನೇಕ ಕರ್ತವ್ಯಗಳನ್ನು ನಮ್ಮ ಸಂವಿಧಾನ ನಿಗದಿಪಡಿಸಿದೆ. ಭಾರತೀಯರಾದ ನಾವು ಮೂಲಭೂತ ಕರ್ತವ್ಯಗಳನ್ನು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು. ಇದು ಸಂವಿಧಾನದ ಆಶಯವಾಗಿದೆ. ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ಪಾಲಿಸೋಣ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು ಕರೆ ನೀಡಿದರು.
ವಕೀಲರಾದ ಗಾಯತ್ರಿ ಕಠಾರೆ ಅವರು ಮೂಲಭೂತ ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಹರ ದಾದ್ಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ್ ಯು ಪೋಚಗುಂಡಿ, ಜಿಲ್ಲಾ ಸರ್ಕಾರಿ ವಕೀಲ ಆಸಿಫ್ ಅಲಿ, ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಂಗವಾಗಿ ಮೂಲಭೂತ ಕರ್ತವ್ಯಗಳ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳು’ ಕುರಿತ ಮಡಿಕೆ ಪತ್ರ ಹಾಗೂ ‘ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್’ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮೂಲಭೂತ ಕರ್ತವ್ಯಗಳನ್ನು ಸ್ವ ಪ್ರೇರಣೆಯಿಂದ ಪಾಲಿಸಿ:ಸತ್ಯ ನ್ಯಾಯಾಧೀಶೆ ವಿಜಯಲಕ್ಷ್ಮಿ ಎಸ್ ಉಪನಾಳ
Advertisements