ಕೃಷಿಯಲ್ಲಿ ಕಡಿಮೆ ನೀರು ಬಳಕೆಯಾಗುವ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಬೇಸಾಯ ಕ್ರಮಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಮನವಿ ಮಾಡಿದರು.
ಯಲಬುರ್ಗಾ ತಾಲೂಕು ಮ್ಯಾದನೇರಿ ಗ್ರಾಮದ ಬಸವರಾಜ ದ್ಯಾಮಣ್ಣ ಪೂಜಾರ ಅವರ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಗೆ ತುಂತುರು ನೀರಾವರಿ ಘಟಕ ಅಳವಡಿಕೆ ವೀಕ್ಷಣೆ ಹಾಗೂ ರೈತರೊಂದಿಗೆ ಸೂಕ್ಷ್ಮ ನೀರಾವರಿ ಅಳವಡಿಕೆ ಕುರಿತು ಸಂವಾದ ನಡೆಸಿ, ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ ಕಾಡುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪದೇ ಪದೇ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರು ಇಂತಹ ಪರಿಸ್ಥಿತಿಯ ನಡುವೆಯೂ, ನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರ್ಥಿಕವಾಗಿ ಲಾಭ ಕಂಡುಕೊಳ್ಳಬೇಕಿದೆ. ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು, ಹೊಲಗಳಲ್ಲಿ ಹಾಯಿಸುವ ಪದ್ಧತಿಯಲ್ಲಿ ಕೃಷಿ ಮಾಡಿದರೆ, ನೀರು ಹೆಚ್ಚು ವ್ಯರ್ಥವಾಗಿ ಹರಿಯುವುದಲ್ಲದೆ, ಬೆಳೆಯ ಇಳುವರಿಯೂ ಅಷ್ಟಕ್ಕಷ್ಟೇ ಆಗಿರುತ್ತದೆ. ಅದರ ಬದಲಿಗೆ ಹನಿ ನೀರಾವರಿ ಅಳವಡಿಕೆ ಅಥವಾ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದರೆ, ಬೆಳೆಯೂ ಚೆನ್ನಾಗಿ ಬರುತ್ತದೆ ಎಂದು ಸಚಿವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಬೆಳೆಗಳಾದ ಶೇಂಗಾ, ಜೋಳ, ಮುಸುಕಿನಜೋಳ, ತೊಗರಿ, ಕಡಲೆ, ರಾಗಿ ಹೀಗೆ ಯಾವುದೇ ಬೆಳೆಯಾದರೂ ತುಂತುರು ನೀರಾವರಿಯಿಂದ ಬೆಳೆಯನ್ನು ಉತ್ತಮವಾಗಿ ಪಡೆಯಬಹುದು ಎಂಬುದು ಸಾಬೀತಾಗಿದೆ. ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುವ ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಕೃಷಿಹೊಂಡ, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ವತಿಯಿಂದ ಸುಮಾರು 01 ಲಕ್ಷ ರೈತರಿಗೆ 320 ಕೋಟಿ ರೂ. ಅನುದಾನವನ್ನು ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಗಾಗಿಯೇ ಬಿಡುಗಡೆ ಮಾಡಿದ್ದೇವೆ. ಬರುವ ಮಾರ್ಚ್ ವೇಳೆಗೆ ರಾಜ್ಯದಲ್ಲಿ 50 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಗುರಿ ಸಾಧನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರೇ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಮಳೆಯ ಪ್ರಮಾಣ ನಿರೀಕ್ಷಿತ ಪ್ರಮಾಣ ಹಾಗೂ ಕಾಲಕ್ಕೆ ತಕ್ಕಂತ ಆಗದಿದ್ದಲ್ಲಿ, ಕೃಷಿ ಹೊಂಡದಲ್ಲಿ ಲಭ್ಯವಿರುವ ನೀರನ್ನು, ಹನಿ ನೀರಾವರಿ ಅಥವಾ ತುಂತುರು ನೀರಾವರಿ ವ್ಯವಸ್ಥೆಗೆ ಬಳಕೆ ಮಾಡಿಕೊಂಡು, ಬೆಳೆ ರಕ್ಷಿಸಿಕೊಳ್ಳುವ ಜೊತೆಗೆ, ಉತ್ತಮ ಇಳುವರಿ ಪಡೆಯಬಹುದಾಗಿದೆ. ಇಂತಹ ಜನಪ್ರಿಯ ಹಾಗೂ ಅತ್ಯುಪಯುಕ್ತ ಯೋಜನೆಯ ಬಗ್ಗೆ ರೈತರೇ ತಮ್ಮ ತಮ್ಮ ಅನುಭವವನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಬೇಕು. ಇತರೆ ರೈತರಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಕೃಷಿ ಸಚಿವ ಭೈರೇಗೌಡ ಅವರು ಹೇಳಿದರು.
ಸಚಿವ ಕೃಷ್ಣ ಭೈರೇಗೌಡ ಅವರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಬೀರಪ್ಪ ಅಂಗಡಿ ಅವರ ಕೃಷಿ ಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕೃಷಿ ಹೊಂಡದ ವೀಕ್ಷಣೆ ಹಾಗೂ ಇದೇ ಗ್ರಾಮದ ದೇವಪ್ಪ ನೀಲನಗೌಡ ಅವರ ಕೃಷಿ ಭೂಮಿಯಲ್ಲಿ ಉತ್ತಮವಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡದ ವೀಕ್ಷಣೆ ಮಾಡಿದರು.