ಭಾರತ ಭಾಗ್ಯ ವಿಧಾತ

 

ಅಂಬೇಡ್ಕರ್ ಅವರ ಚಿತ್ರ ಸದಾ ನನ್ನ ಚಿತ್ತವನ್ನು ಕಾಡುತ್ತದೆ. ನಮ್ಮ ದೇಶ ಅವರನ್ನು ಏಕೆ ಒಮ್ಮನಸ್ಸಿನಿಂದ ಒಪ್ಪಿಕೊಳ್ಳುತ್ತಿಲ್ಲ? ಗಾಂಧೀಜಿಯವರನ್ನು ಮಹಾತ್ಮ ಎಂದು ಸಂಭೋದಿಸಿದ ಭಾರತ ಅವರನ್ನು ಏಕೆ ಕೇವಲ ‘ಸಂವಿಧಾನ ಶಿಲ್ಪಿ’ ಎಂದಷ್ಟೇ ಕರೆದು ಸುಮ್ಮನಾಗುತ್ತಿದೆ? 

ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಮಧುರ ಸಂಬಂಧ ಇರಲಿಲ್ಲ. ಅಂಬೇಡ್ಕರ್ ಅವರ ನಡೆಗಳಿಗೆ ಗಾಂಧಿ ತಡೆಗೋಡೆ ಇಡುತ್ತಿದ್ದರು. ಅಂಬೇಡ್ಕರ್ ಕೇವಲ ತಳವರ್ಗಗಳ ಸುಧಾರಣೆಗಾಗಿ ಹೋರಾಡಿದ ನಾಯಕರು. ಭಾರತದ ಜನಸಮುದಾಯವನ್ನು ಜಾತಿಯ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸಿದರು.. ಇತ್ಯಾದಿಯಾಗಿ ಅಂಬೇಡ್ಕರ್  ಮತ್ತು ಗಾಂಧಿ ನಡುವಣ ಗೊಂದಲಗಳು ದೇಶದ ಕೆಲವರ  ಮನದಲ್ಲಿರುವುದನ್ನು ಕಂಡು ನನಗೆ ನೋವು ಎನಿಸುತಿತ್ತು.Related image

ಅಂಬೇಡ್ಕರ್ ನಮ್ಮ ದೇಶದ ಒಬ್ಬ ಮಹಾನ್ ನಾಯಕರು, ಜಗತ್ತಿನ ಪ್ರತಿಭಾವಂತ ಅರ್ಥಶಾಸ್ತ್ರಜ್ಞರು, ಅಪರಿಮಿತವಾಗಿ ದೇಶವನ್ನು ಪ್ರೀತಿಸಿದವರು, ಸಮಾಜದ ಎಲ್ಲ ವರ್ಗದ ಜನರಿಗೂ ಒಳಿತಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ …ಇತ್ಯಾದಿ ವಿಷಯಗಳನ್ನು ಸಾಮಾನ್ಯ ಜನರಿಗೆ ಹೇಗೆ ಮನದಟ್ಟು ಮಾಡುವುದು ಎನ್ನುವ ವಿಷಯ ನನ್ನ ಮನಸ್ಸಿನಲ್ಲಿ ಹಲವಾರು ವರ್ಷಗಳಿಂದ ಕೊರೆಯುತ್ತಲೇ ಇತ್ತು. 

ಕಳೆದ ವರ್ಷ ರಾಜ್ಯದಲ್ಲಿ ಅಂಬೇಡ್ಕರ್ ಅವರ 125 ನೇ ವರ್ಷಾಚರಣೆಯ ವಿಷಯ ಪ್ರಸ್ತಾಪವಾದಾಗ ನಮಗೆ ಒಂದು ಅಪರೂಪದ ಸಂದರ್ಭ ಒದಗಿ ಬಂತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅಂಬೇಡ್ಕರ್ 125 ನೇ ವರ್ಷಾಚರಣೆಯ ಅಂಗವಾಗಿ ಒಂದು ಧ್ವನಿ -ಬೆಳಕು ಕಾರ್ಯಕ್ರಮವನ್ನು ರೂಪಿಸಲಿದೆ ಎಂದು ಆಯ -ವ್ಯಯ ಭಾಷಣದಲ್ಲಿಯೇ ಘೋಷಿಸಲಾಯಿತು. 

ನಂತರ ಅದನ್ನು ಕಾರ್ಯರೂಪಕ್ಕೆ ಇಳಿಸುವ ಬಹು ದೊಡ್ಡ ಹೊಣೆಗಾರಿಕೆ ವಾರ್ತಾ ಇಲಾಖೆಯ ಮೇಲೆ ಬಿತ್ತು . ಈಗಾಗಲೇ ಜನರ ಮುಂದೆ ಒಂದು ಜನಜನಿತ ವಾಗಿರುವ ಸಂವಿಧಾನ ಶಿಲ್ಪಿ ಎನ್ನುವ ಅಂಬೇಡ್ಕರ್ ಚಿತ್ರ ಇದೆ. ಆ ಚಿತ್ರವನ್ನು ಒಡೆದು ಅವರು  ಕೇವಲ ಸಂವಿಧಾನದ ಶಿಲ್ಪಿ ಅಲ್ಲ, ಇಡೀ ದೇಶದ ಒಳಿತಿಗಾಗಿ ಶ್ರಮಿಸಿದವರು ಎನ್ನುವ ನಮ್ಮ ಹೊಸ ಕಲ್ಪನೆಯಅಂಬೇಡ್ಕರ್ ಚಿತ್ರವನ್ನು  ಜನರ ಮುಂದೆ ಹೇಗೆ ಇಡುವುದು ಎನ್ನುವ ಹೊಯ್ದಾಟ ಶುರುವಾಯ್ತು. ದಿನನಿತ್ಯ ಇದರ ಬಗ್ಗೆ ಯೋಚಿಸುತ್ತಿರುವಾಗಲೇ ನನಗೆ ಸಿಕ್ಕಿದ್ದು ಬಿ ಎಂ ಗಿರಿರಾಜ್ ಅವರ ಒಂದು ಪುಟ್ಟ ವಿಡಿಯೋ ಕ್ಲಿಪ್. 

15541195_1394069827279056_7712751842065596412_n

ಕಳೆದ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಬಿ. ಎಂ ಗಿರಿರಾಜ್, ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಬಗ್ಗೆ ಮೂರು ನಿಮಿಷಗಳ ಒಂದು ಕಿರುಚಿತ್ರವನ್ನು ಹಂಚಿಕೊಂಡಿದ್ದರು. ಇದು ಹುಡುಕುತ್ತಿದ್ದ ಬಳ್ಳಿ ನನ್ನ ಕಾಲಿಗೇ ತೊಡರಿ ಬಿದ್ದ ಪ್ರಸಂಗ. ಅದರಲ್ಲಿ ಗಿರಿರಾಜ್  ಅಂಬೇಡ್ಕರ್ ಅವರನ್ನು ನನ್ನಂತೆಯೇ ಯೋಚಿಸಿ ಅವರೊಬ್ಬ  ಮೇಧಾವಿ, ಆರ್ಥಿಕ ತಜ್ಞ, ಸಮಾಜದ ಎಲ್ಲ ಜನರಿಗೆ ಒಳಿತಾಗುವ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಚಿತ್ರಿಸಿದ್ದರು.

ಇದು ನನ್ನ ಗಮನ ಸೆಳೆದು ಮುಂದಿನ ನಡೆಗೆ ಕಾರಣವಾಯಿತು. 

ಧ್ವನಿ ಬೆಳಕು ಕಾರ್ಯಕ್ರಮ ರೂಪಿಸುವುದು ಸುಲುಭದ ಕಾರ್ಯವಲ್ಲ. ಸಾಹಿತ್ಯ ರಚನೆ, ಸಂಗೀತ ನಿರ್ದೇಶನಕ್ಕೆ ಸೂಕ್ತವಾದವರನ್ನು ಆಯ್ಕೆ ಮಾಡಬೇಕು. ಸುಮಾರು ನೂರು ಕಲಾವಿದರು, ತಂತ್ರಜ್ಞರಿಗೆ ಎರಡು ವಾರ ತರಬೇತಿ ಆಗಬೇಕು. ಅಗತ್ಯ ವೇಷಭೂಷಣ, ರಂಗಪರಿಕರ,ಬೆಳಕು ವಿನ್ಯಾಸ, ನೃತ್ಯ ಸಂಯೋಜನೆ, ಕಲಾವಿದರ ವಾಸ್ತವ್ಯ, ಊಟ ತಿಂಡಿ ಇತ್ಯಾದಿ ವ್ಯವಸ್ಥೆಯನ್ನು ಸರ್ಕಾರಿ ನಿಯಮಾವಳಿಗಳ ಚೌಕಟ್ಟಿನಲ್ಲಿ ರೂಪಿಸಬೇಕು. 

10ಇದಕ್ಕೆಲ್ಲಾ ನಮ್ಮಲ್ಲಿ ಅಷ್ಟು ಸಮಯ ಇರಲಿಲ್ಲ. ಆದರೆ ನಾವು ಈ ಸವಾಲಿನ ಕಾರ್ಯವನ್ನು ಈ ಹಿಂದೆ ನಮ್ಮ ಇಲಾಖೆಯೇ ರೂಪಿಸಿದ್ದ “ಮನುಷ್ಯ ಜಾತಿ ತಾನೊಂದೇ ವಲಂ” ಧ್ವನಿ ಬೆಳಕು ಕಾರ್ಯಕ್ರಮದ ಅನುಭವದ ನೆಲೆಯಲ್ಲಿ ಸುಲಭವಾಗಿ ಮುಂದೆ ತೆಗೆದು ಕೊಂಡುಹೋದೆವು. ಅಂಬೇಡ್ಕರ್ ಅವರ ಬಗ್ಗೆ ಒಳನೋಟ ನೀಡಲು, ಅಧ್ಯಯನ ಆಧಾರಿತ ಹೊಳಹುಗಳನ್ನು ನೀಡಲು, ಈ ಕಾರ್ಯಕ್ರಮದ ಸಾಹಿತ್ಯ, ಸಂಗೀತ ರಚನೆಗೆ ಅನುಮೋದನೆ ಪಡೆಯಲು ನಾಡಿನ ಹಿರಿಯ ಸಾಹಿತಿಗಳಾದ ಸಿದ್ದಲಿಂಗಯ್ಯ, ಎಲ್ .ಹನುಮಂತಯ್ಯ , ಬಿ. ಟಿ. ಜಾಹ್ನವಿ, ಅಂಬೇಡ್ಕರ್ ಪ್ರಶಸ್ತಿ ವಿಜೇತರಾದ ಮಾಂಬಳ್ಳಿ  ಚಿನ್ನಸ್ವಾಮಿ, ಮೈಸೂರಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ನರೇಂದ್ರಸ್ವಾಮಿ ಹಾಗು ಸಮಾಜ ಕಲ್ಯಾಣ, ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿಯನ್ನು ಸರಕಾರದಿಂದ ರಚಿಸಿಕೊಂಡೆವು. 

ಇಲ್ಲಿಗೆ ಒಂದು ಹಂತದ ಕಾರ್ಯ ಮುಗಿಯಿತು. ಎರಡನೇ ಹಂತ; ಇದು ಸೃಜನ ಶೀಲತೆಯ ಕಾರ್ಯ.

ಇಲ್ಲಿಂದಲೇ ನಮ್ಮ ನಿಜವಾದ ಸವಾಲುಗಳು ಆರಂಭವಾದವು. ಕುಳಿತಲ್ಲಿ ನಿಂತಲ್ಲಿ ಇದರದ್ದೇ ಚರ್ಚೆ. ಕಡೆ ಕಡೆಗೆ ಇದು ಯಾವ ಹಂತಕ್ಕೆ ತಲುಪಿತೆಂದರೆ ಮನೆಯಲ್ಲಿದ್ದಾಗಲೂ ಇದರ ಆಳ ವಿಸ್ತಾರಗಳು, ಅದನ್ನು ಜನರಿಗೆ ಮನಸ್ಸಿಗೆ ಮುದ ನೀಡುವಂತೆ ಹೇಗೆ ರೂಪಿಸುವುದು ಎನ್ನುವ ಚರ್ಚೆಗಳು ಶುರುವಾದವು. ಒಂದು ದಿನ ಬಾಳ ಸಂಗಾತಿಯೊಡನೆ ನಡೆದ ಇಂತಹದೇ ಚರ್ಚೆಯಲ್ಲಿ , ಅಂಬೇಡ್ಕರ್ ತಳಸಮುದಾಯದ ಒಳಿತಿಗಾಗಿ ದುಡಿದ ಜನ ನಾಯಕರು. ಆ ತಳಸಮುದಾಯಗಳ ಜೀವಸೆಲೆಯಾದ ಜಾನಪದ ಕಲೆ ಮತ್ತು ಸಂಗೀತ ಇವುಗಳನ್ನೇ ಪ್ರಧಾನವಾಗಿಟ್ಟುಕೊಂಡು ಧ್ವನಿ ಬೆಳಕು ಕಾರ್ಯಕ್ರಮ ರೂಪಿಸುವುದೇ ಒಳ್ಳೆಯದು’ ಎನ್ನುವ ಹೊಳಹು ಧಕ್ಕಿತು. ಈ ಎಳೆಯನ್ನೇ ಹಿಡಿದು ನಾವು ಮುಂದುವರಿದೆವು.

ಈ ಹಿಂದೆ ನಮ್ಮ ಇಲಾಖೆಗಾಗಿ ‘ಮನುಷ್ಯ ‘ಜಾತಿ ತಾನೊಂದೇ ವಲಂ ‘ ಧ್ವನಿ ಬೆಳಕು ಕಾರ್ಯಕ್ರಮ ನನ್ನ ಪರಿಕಲ್ಪನೆಯಲ್ಲಿ ಮೂಡಿ ಬಂದಾಗ ನಮ್ಮ ಜೊತೆಗಿದ್ದ ಹಿರಿಯ ರಂಗ ನಿರ್ದೇಶಕ ಸಿ . ಬಸವಲಿಂಗಯ್ಯ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಜನಪರ ಸಾಹಿತಿ ಕೆ.ವೈ ನಾರಾಯಣಸ್ವಾಮಿ, ಹಿರಿಯ ರಂಗ ವಿನ್ಯಾಸಕ ಶಶಿಧರ ಅಡಪ ಹಾಗು ನಾವು ಕುಳಿತು ಚರ್ಚೆ ನಡೆಸಿದೆವು. 

bharatha-bhagyavidhaata30ಇಲಾಖೆಯ ಹೆಮ್ಮೆ ಹಾಗು ಪ್ರತಿಷ್ಠಿತ ‘ಅಂಬೇಡ್ಕರ್ ‘ಧ್ವನಿ ಬೆಳಕು ಕಾರ್ಯಕ್ರಮವನ್ನು ಈ ಸಾರಿ ಯುವ ಪ್ರತಿಭಾನ್ವಿತ ತಂಡದಿಂದ ಮಾಡಿಸಬೇಕು . ನಮ್ಮ ಕಣ್ಣ ಮುಂದೆಯೇ ನಮ್ಮ ಮಾರ್ಗದರ್ಶನದಲ್ಲಿ ಯುವ ತಂಡ ಇದನ್ನ ನಿಜಗೊಳಿಸಬೇಕು ಎನ್ನುವ ನನ್ನ ಸಲಹೆಯನ್ನು ಹಿರಿಯರೆಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು. ಮಹೋನ್ನತ ಆಶಯದ ಈ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಬಸವಲಿಂಗಯ್ಯನವರು ನಮ್ಮ ಪ್ರೀತಿಯ ‘ಬಸು ‘ ಭಾರತ ಭಾಗ್ಯ ವಿಧಾತ” ಎನ್ನುವ ಅರ್ಥವತ್ತಾದ ಹಾಗು ಆಕರ್ಷಕವಾದ ಶೀರ್ಷಿಕೆ ಸೂಚಿಸಿದರು. ಗೆಳೆಯ ಕೆ ವೈ ಎನ್ ಮುಂದೆ ಬಂದು ಶೀರ್ಷಿಕೆ ಗೀತೆ ರಚಿಸಿಕೊಟ್ಟರು. ಶಶಿ ಮನ ಸೆಳೆಯುವ ರಂಗ ವಿನ್ಯಾಸ ಮಾಡಿಕೊಟ್ಟರು. ಹಿರಿಯರ ಹಾರೈಕೆಯಲ್ಲಿ ಪ್ರತಿಭಾವಂತ ಕಿರಿಯರ ತಂಡ ರೂಪುಗೊಂಡ ಪರಿ ಇದು.

ಈ ಹಿರಿಯರ ಗೌರವ ಸಲಹಾ ಮಂಡಳಿಯ ಒಪ್ಪಿಗೆಯಂತೆ ಯುವ ನಿರ್ದೇಶಕ ಬಿ. ಎಂ ಗಿರಿರಾಜ್ ಸಾಹಿತ್ಯ, ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಪದ್ಮಿನಿ ಅಚ್ಚಿ ನೃತ್ಯ ಸಂಯೋಜನೆ ಹಾಗು ಇನ್ನಿತರ ತಜ್ಞರ ಸಹಕಾರದಿಂದ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮ ರೂಪಿಸುವುದು ಎಂದು ತೀರ್ಮಾನವಾಯಿತು. ಇನ್ನು ಮುಂದಿನದೆಲ್ಲ ಈಗ ನಮ್ಮ  ಕಣ್ಣ ಮುಂದೆಯೇ ಇದೆ. 

“ಮನುಷ್ಯ ಜಾತಿ ತಾನೊಂದೇ ವಲಂ ” ನ ಬಹು ದೊಡ್ಡ ಪ್ರಭಾವಳಿಯಿಂದ ಹೊರಬಂದು. ” ಭಾರತ ಭಾಗ್ಯ ವಿಧಾತ ” ವನ್ನು ಕಟ್ಟಿಕೊಡುವ ಹೊಣೆಗಾರಿಕೆಯನ್ನು ನಮ್ಮ ಯುವ ತಂಡ ಸಮರ್ಥವಾಗಿ ನಿರ್ವಹಿಸಿದೆ. ನನ್ನ ಪರಿಕಲ್ಪನೆಯ ಪ್ರತಿಯೊಂದು ಆಶಯಗಳನ್ನು ಈ ಯುವ ಪ್ರತಿಭಾವಂತ ತಂಡ ಜನರ ಮನ ಮುಟ್ಟುವಂತೆ ಕಟ್ಟಿಕೊಟ್ಟಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಾಡಿನ ಪ್ರಜ್ಞಾವಂತ ಜನತೆ ವಾರ್ತಾ ಇಲಾಖೆಯ ಹೆಮ್ಮೆಯ ಪ್ರಯೋಗವನ್ನು ತೆರೆದ ಹೃದಯದಿಂದ, ತುಂಬು ಮನಸ್ಸಿನಿಂದ ಸ್ವೀಕರಿಸಿದೆ . ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ “ಭಾರತ ಭಾಗ್ಯ ವಿಧಾತ” ಕಾರ್ಯಕ್ರಮ ಈಗಾಗಲೇ ಜನಮನ ಸೂರೆಗೊಂಡಿದೆ.16252122_1432845826734789_1898397141799544177_o

ನಮ್ಮ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿನಿಂದ ಉಬ್ಬಿಹೋಗಿದ್ದಾರೆ . ವಾರ್ತಾ ಇಲಾಖೆಯ ಇತಿಹಾಸದಲ್ಲಿಯೇ ಪ್ರಥಮವಾಗಿ ಇಂತಹದೊಂದು ಮಹೋನ್ನತ ಆಶಯದ ಕಾರ್ಯಕ್ರಮವನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಸಂಭ್ರಮ ಸಡಗರಗಳಲ್ಲಿ ಮುಳುಗಿ ಹೋಗಿದ್ದಾರೆ.

ನನಗಂತೂ ನಾಡಿನ ಜನತೆಯ ಪ್ರೀತಿ ವಿಶ್ವಾಸದ ಮಾತುಗಳಿಂದ ಕೊರಳುಬ್ಬಿ ಬರುತ್ತಿದೆ . ಕಣ್ಣಂಚಿನಲ್ಲಿ ಸಂತೋಷದ ಹನಿಗಳು ಹನಿಯುತ್ತಿವೆ . ಸರ್ಕಾರಿ ಸೇವೆಯಲ್ಲಿ ಇಂತಹ ಸಾರ್ಥಕ ಸೇವೆಗಳನ್ನು ಮಾಡಲು ಅವಕಾಶ ಸಿಕ್ಕಿತಲ್ಲ ಎನ್ನುವ ಸಂತಸದಿಂದ ಮಾತುಗಳೇ ಹೊರಬರುತ್ತಿಲ್ಲ. 

ಈ ಸಾಧನೆಯಲ್ಲಿ ನನ್ನ ಸಹೋದ್ಯೋಗಿಗಳ ಸಹಕಾರ ದೊಡ್ಡದು . ‘ಭಾರತ ಭಾಗ್ಯ ವಿಧಾತ ‘ ಕಾರ್ಯಕ್ರಮದ ಸಾಮಾಜಿಕ ಕಳಕಳಿಯನ್ನು ಅರ್ಥ ಮಾಡಿಕೊಂಡು ಅದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸಿದ್ದಾರೆ . ಅವರಿಗೆ ನನ್ನ ಅಭಿನಂದನೆ ಹಾಗೂ ಕೃತಜ್ಞತೆಗಳು .

This slideshow requires JavaScript.

ಇವೆಲ್ಲಕ್ಕೂ ಕಳಸಪ್ರಾಯವಿಟ್ಟಂತೆ ನಾಡಿನ ಎಲ್ಲೆಡೆಯಿಂದ ಆಯ್ಕೆಯಾಗಿ ಬಂದಿರುವ ಯುವ ಕಲಾವಿದರು ನಮ್ಮ ಅಂಬೇಡ್ಕರ್ ಆಶಯವನ್ನು ಮೈದುಂಬಿಕೊಂಡು ಅಭಿನಯಿಸುತ್ತಾ ರಂಗದ ಮೇಲೆ ಮಿಂಚಿನ ಸಂಚಾರ ಮೂಡಿಸಿದ್ದಾರೆ . “ಭಾರತ ಭಾಗ್ಯ ವಿಧಾತ” ಕಾರ್ಯಕ್ರಮದ ಯಶಸ್ಸು ರಾಜ್ಯದ ನೆಚ್ಜಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಕಿವಿ ತಲುಪಿದೆ. ಹಾಸನ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದ ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎ. ಮಂಜುರವರು ಈ ಕಾರ್ಯಕ್ರಮವನ್ನು ಮೆಚ್ಚಿ ಇದನ್ನು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಪ್ರದರ್ಶಿಸುವಂತೆ ಮುಖ್ಯ ಮಂತ್ರಿಗಳಿಗೆ ಅವರ ಶಾಸಕಾಂಗ ಪಕ್ಷದ ಸಭೆಯಲ್ಲೇ ಒತ್ತಾಯಿಸಿದ್ದಾರೆ.

ಸದಾ ಸಾಮಾಜಿಕ ನ್ಯಾಯದ ಪ್ರತಿಪಾದನೆ  ಮಾಡುವ ಮಾನ್ಯ ಮುಖ್ಯ ಮಂತ್ರಿಗಳು ಇದಕ್ಕೆ ಒಪ್ಪಿ ಪ್ರತಿ ತಾಲ್ಲೂಕಿನಲ್ಲಿಯೂ ‘ಭಾರತ ಭಾಗ್ಯ ವಿಧಾತ ‘ ಪ್ರದರ್ಶನಕ್ಕೆ ಹಸಿರು ನಿಶಾನೆ ನೀಡಿದ್ದಾರೆ.

ಒಟ್ಟಾರೆಯಾಗಿ ನಮ್ಮಇಲಾಖೆಯ ಹೆಮ್ಮೆ ಹಾಗೂ ಪ್ರತಿಷ್ಠಿತ “ಭಾರತ ಭಾಗ್ಯ ವಿಧಾತ” ಧ್ವನಿ ಬೆಳಕು ಕಾರ್ಯಕ್ರಮ ನಾಡಿನಾದ್ಯಂತ ಪ್ರದರ್ಶನಗೊಳ್ಳಲು ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ.

ಎನ್ ಆರ್ ವಿಶುಕುಮಾರ್
ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s