ಪ್ರವಾಸಿ ಭಾರತೀಯ ದಿವಸ್: ಮುಖ್ಯಮಂತ್ರಿಯವರ ಸಂದೇಶ

ಬೆಂಗಳೂರು ಆಕಾಶವಾಣಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶ.

ಆತ್ಮೀಯ ನಾಡ ಬಾಂಧವರೆ,
ಪ್ರವಾಸಿ ಭಾರತೀಯ ದಿವಸ್ ಅಂದರೆ ಅನಿವಾಸಿ ಭಾರತೀಯರ ದಿನಾಚರಣೆ. 2003ರಿಂದ ಪ್ರತಿವರ್ಷ ಜನವರಿ 9ರಂದು ಆಚರಿಸಲಾಗುತ್ತಿದೆ. 1915ರ ಜನವರಿ 9 ಭಾರತ ಕಂಡ ಮಹಾ ಪ್ರವಾಸಿ ಮೋಹನದಾಸ ಕರಮಚಂದ ಗಾಂಧಿ ದಕ್ಷಿಣ ಆಫ್ರಿಕಾ ತೊರೆದು ತಾಯ್ನಾಡಿಗೆ ಮರಳಿದ ದಿನ. ಭಾರತಕ್ಕೆ ಬಂದಿಳಿದ ಗಾಂಧೀಜಿ ತಮ್ಮನ್ನು ಸ್ವಾತಂತ್ರ್ಯಹೋರಾಟದಲ್ಲಿ ತೊಡಗಿಸಿಕೊಂಡು ಭಾರತವನ್ನು ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಈಗ ಇತಿಹಾಸದ ಪುಟಗಳಲ್ಲಿವೆ.
ಮಹಾತ್ಮ ಗಾಂಧೀಜಿ ಭಾರತಕ್ಕೆ ಮರಳಿದ ಈ ದಿನದ ನೆನಪಿನಲ್ಲಿ 2003ರಿಂದ ಪ್ರತಿವರ್ಷ ಜನವರಿ 9ರಂದು ಭಾರತ ಸರ್ಕಾರ ಪ್ರವಾಸಿ ಭಾರತೀಯ ದಿನವನ್ನು ಆಚರಿಸುತ್ತಾ ಬಂದಿದೆ. ದೇಶದ ಬೇರೆಬೇರೆ ರಾಜ್ಯಗಳಲ್ಲಿ 13 ಪ್ರವಾಸಿ ಭಾರತೀಯ ದಿನ ಆಚರಿಸಲಾಗಿದ್ದು ಈ ಬಾರಿಯದ್ದು 14ನೆಯದ್ದು.

ಈ ಬಾರಿಯ ಹೊಸ ವರ್ಷದ ಹೊಸ್ತಿಲಲ್ಲಿ ಜನವರಿ 7 ರಿಂದ 9 ರ ವರೆಗೆ ಉದ್ಯಾನ ನಗರಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲಿ ಕೇಂದ್ರ ಸರ್ಕಾರದ ಸಹಭಾಗಿತ್ವದೊಡನೆ ಕರ್ನಾಟಕ ಸರ್ಕಾರವು ಪ್ರವಾಸಿ ಭಾರತೀಯ ದಿವಸ್ ಆಯೋಜಿಸಿದೆ.
ವಿಶ್ವಮಾನವ ಸಂದೇಶದ ಮೇಲೆ ನಂಬಿಕೆ ಇಟ್ಟಿರುವ ನಾಡು ನಮ್ಮದು. ಈ ನಾಡಿನ ಪ್ರಗತಿಯಲ್ಲಿ ಇಲ್ಲಿನ ನಿವಾಸಿಗಳು ಮಾತ್ರವಲ್ಲ ಅನಿವಾಸಿಗಳ ಕೊಡುಗೆಯೂ ಇದೆ ಎನ್ನುವುದನ್ನು ನಾನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ. ಹುಟ್ಟೂರು ತೊರೆದು ಬೇರೆ ದೇಶಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುವುದು ಸಾಹಸಿಗಳು ಮತ್ತು ಉದ್ಯಮಶೀಲರಿಗೆ ಮಾತ್ರ ಸಾಧ್ಯ. ಅನಿವಾಸಿ ಭಾರತೀಯರು ಏಕಕಾಲದಲ್ಲಿ ಎರಡು ದೇಶಗಳ ಅಭಿವೃದ್ದಿಯಲ್ಲಿ ಪಾಲುದಾರರಾಗಿರುತ್ತಾರೆ. ಅವರು ಕಠಿಣ ಶ್ರಮ, ನಿಷ್ಠೆ, ಪ್ರಾಮಾಣಿಕತೆಯ ಮೂಲಕ ತಾವು ಉದ್ಯೋಗ-ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ದೇಶಗಳ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವುದು ಮಾತ್ರವಲ್ಲ, ಅಲ್ಲಿ ಗಳಿಸಿದ್ದನ್ನು ತಾಯ್ನಾಡಿನಲ್ಲಿ ವಿನಿಯೋಗ ಮಾಡುವ ಮೂಲಕ ನಮ್ಮ ದೇಶದ ಅಭಿವೃದ್ದಿಗೂ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಪ್ರಪ್ರಥಮ ಬಾರಿಗೆ ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಇಡೀ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿಯೇ ಹೊಸ ಶಕೆಯನ್ನು ಮೂಡಿಸಲಿದೆ ಎಂಬ ವಿಶ್ವಾಸ ನನ್ನಲ್ಲಿದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವೈಮಾನಿಕಾಂತರಿಕ್ಷ ಕ್ಷೇತ್ರಗಳ ಜೊತೆ ಜೊತೆಗೆ ಆಹಾರ ಸಂಸ್ಕರಣೆ ಹಾಗೂ ಮೂಲಭೂತ ಸೌಲಭ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿಕೆದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಅಲ್ಲದೆ, ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೆಳೆಯಲು ಮಹೋನ್ನತ ಅವಕಾಶಗಳಿಗೆ ಭಾರತೀಯ ಪ್ರವಾಸಿ ದಿವಸ್ ಅತ್ಯುತ್ತಮ ವೇದಿಕೆಯಾಗಿದೆ.

ಜನವರಿ 7 ರಂದು ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವಜನತೆಯನ್ನು ಆಕರ್ಷಿಸಲು ಯುವ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತಿದೆ. ಅದೇ ದಿನ ಸವಾಲುಗಳ ನಡುವೆಯೂ ನಾವಿನ್ಯತೆಯ ಮೂಲಕ ಬೆಳವಣಿಗೆಗೆ ಪುಷ್ಠಿ ನೀಡುವ ವಿಷಯವನ್ನು ಚರ್ಚಿಸಿ ಕರ್ನಾಟಕದಲ್ಲಿ ನವೋದ್ಯಮಕ್ಕೆ ಲಭಿಸುವ ವಿಪುಲ ಅವಕಾಶಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ.
ಪ್ರವಾಸಿ ಭಾರತೀಯ ದಿವಸ್‍ನ ಉದ್ಘಾಟನೆ ಜನವರಿ 8 ರ ಆಕರ್ಷಣೆ. ಭಾರತದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಸಿ ಭಾರತೀಯ ದಿವಸ್‍ಗೆ ಅಂದು ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಂತೆಯೇ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ರಾಜ್ಯಗಳಲ್ಲಿನ ಭೌಗೋಳಿಕ ವಿಶೇಷತೆಗಳು, ಬಂಡವಾಳ ಹೂಡಿಕೆದಾರರಿಗೆ ಲಭ್ಯವಿರುವ ಅವಕಾಶಗಳು ಹಾಗೂ ತಮ್ಮ ಸರ್ಕಾರದಲ್ಲಿ ದೊರೆಯುವ ಸವಲತ್ತು ಮತ್ತು ಸೌಲಭ್ಯಗಳನ್ನು ಕುರಿತು ಬಂಡವಾಳ ಹೂಡ ಬಯಸುವ ಅನಿವಾಸಿ ಭಾರತೀಯರಿಗೆ ವಿಶೇಷ ಆಮಂತ್ರಣ ನೀಡಲಿದ್ದಾರೆ.

ರಾಜ್ಯ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯೇ ಹೊರತು ಎಲ್ಲಾ ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ಬಲಿಷ್ಠ ಭಾರತದ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂಬುದು ಈ ಕಾರ್ಯಕ್ರಮದ ಸದಾಶಯವಾಗಿದೆ.
ಇನ್‍ವೆಸ್ಟ್ ಕರ್ನಾಟಕ ಲಾಂಛನದಡಿಯಲ್ಲಿ ಕರ್ನಾಟಕದಲ್ಲಿ ನಾವಿನ್ಯತೆ, ಅವಿಷ್ಕಾರ ಹಾಗೂ ಹೂಡಿಕೆ ಎಂಬ ವಿಷಯ ಚರ್ಚಿಸಿ ಕರ್ನಾಟಕದಲ್ಲಿನ ಹೂಡಿಕೆಯ ಅವಕಾಶಗಳನ್ನು ಪರಿಚಯಿಸಲಾಗುತ್ತದೆ.
ಪ್ರವಾಸಿ ಭಾರತೀಯ ದಿವಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿ ಅವರು ಪಾಲ್ಗೊಂಡು ವಿವಿಧ ಕ್ಷೇತ್ರಗಳಲ್ಲಿ ಉತ್ಕøಷ್ಠ ಸಾಧನೆ ಮಾಡಿರುವ ಅನಿವಾಸಿ ಭಾರತೀಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಾರೆ. ಇದು ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್‍ನ ಅಂತಿಮ ಘಟ್ಟ ಮಾತ್ರವಲ್ಲ ಅವಿಸ್ಮರಣೀಯ ಘಟ್ಟವೇ ಆಗಿವೆ.

ವಿದೇಶದ ಗಣ್ಯಾತೀಗಣ್ಯರು, ಕೇಂದ್ರದ ಸಚಿವರು, ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟದ ಸದಸ್ಯರು, ಸಂಸದರು-ಶಾಸಕರು, ಎಲ್ಲಕ್ಕೂ ಮಿಗಿಲಾಗಿ ಅನಿವಾಸಿ ಭಾರತೀಯರು, ಅದರಲ್ಲೂ ವಿದೇಶದ ನೆಲದಲ್ಲಿ ನೆಲೆಸಿರುವ ಕನ್ನಡಿಗರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಪ್ರವಾಸಿ ಭಾರತೀಯ ದಿವಸ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಕೇವಲ ಮೂರು ದಿನಗಳ ಸಡಗರ ಮತ್ತು ಸಂಭ್ರಮ ಮಾತ್ರವಲ್ಲ ಮುಂಬರುವ ವರ್ಷಗಳ ಸಡಗರ ಮತ್ತು ಸಂಭ್ರಮಕ್ಕೆ ಸಣ್ಣ ವೇದಿಕೆಯಷ್ಟೇ ಎಂಬುದು ನನ್ನ ಭಾವನೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದಲ್ಲಿ 25 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, ಅದರಲ್ಲಿ ಸಿಂಹಪಾಲು ಕರ್ನಾಟಕದಲ್ಲಿ ಒಂಭತ್ತು ಲಕ್ಷ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ನಮ್ಮ ಹೆಗ್ಗಳಿಕೆಯಾಗಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 2014-19 ಅವಧಿಗೆ ಅನ್ವಯವಾಗುವಂತೆ ಹೊಸ ಕೈಗಾರಿಕಾ ನೀತಿಯನ್ನು ತಂದದ್ದು ತಮಗೆ ತಿಳಿದೇ ಇದೆ. ಮಾಹಿತಿ ತಂತ್ರಜಾನ ಕ್ಷೇತ್ರಕ್ಕೆ 4-ಐ ಪಾಲಿಸಿ ಹಾಗೂ ಕರ್ನಾಟಕ ಅನಿಮೇಷನ್ ವಿಷ್ವವಲ್ ಎಫೆಕ್ಟ್ಸ್, ಗೇಮಿಂಗ್ ಹಾಗೂ ಕಾಮಿಕ್ ಪಾಲಿಸಿ ಎಂಬ ಕ್ರಾಂತಿಕಾರಕ ನೀತಿಗಳನ್ನು ಕೊಡುಗೆ ಕೊಟ್ಟದ್ದು ನಮ್ಮ ಸರ್ಕಾರವೇ. ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ನವೋದ್ಯಮ ನೀತಿಯನ್ನು ತಂದ ಕೀರ್ತಿಯೂ ನಮ್ಮ ಸರ್ಕಾರದ್ದೇ.

ಇದೀಗ ಅನಿವಾಸಿ ಭಾರತೀಯರ ನೀತಿಯನ್ನೂ ಪ್ರಕಟಿಸಿದ್ದೇವೆ. ಬಂಡವಾಳ ಹೂಡಿಕೆದಾರರಿಗೆ ಉದ್ಯೋಗ ಸ್ಥಾಪನೆ ಕರ್ನಾಟಕದಲ್ಲಿ ಸುಲಭ ಮಾತ್ರವಲ್ಲ, ಸುಖಕರ ಎಂಬ ಹಿತಕರ ಅನುಭವವನ್ನು ನೀಡುವುದೂ ನಮ್ಮ ಸರ್ಕಾರದ ಉದ್ದೇಶವಾಗಿದೆ.
ಕಳೆದ ಸಾಲಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-2016 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಯಶಸ್ಸು ಫಲಪ್ರದವಾದ ಹಿನ್ನೆಲೆಯಲ್ಲಿ, ಪ್ರವಾಸಿ ಭಾರತೀಯ ದಿವಸ್ ಕೂಡಾ ಯಶಪ್ರದವಾಗುವ ಎಲ್ಲಾ ಲಕ್ಷಣಗಳೂ ಈಗಾಗಲೇ ಗೋಚರಿಸುತ್ತಿದೆ.

ಬಂಡವಾಳ ಹೂಡಲು ಬಯಸುವ ಎಲ್ಲಾ ಅನಿವಾಸಿ ಭಾರತೀಯರಿಗೆ ಹಾಗೂ ಅವಕಾಶಗಳ ಅನ್ವೇಷಕರಿಗೆ ಕರ್ನಾಟಕವೇ ತವರು ! ನಮ್ಮ ಸರ್ಕಾರದ ಉತ್ಸುಕತೆಯು ಕೇವಲ ಅನುಜ್ಞಾ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುವುದರಲ್ಲಿ ಮುಗಿಯುವುದಿಲ್ಲ. ಅಭಿವ್ಯಕ್ತಿಯಲ್ಲಿ ಆಸಕ್ತಿ ತೋರುವುದಲ್ಲಿ ಪೂರ್ಣಗೊಳ್ಳುವುದಿಲ್ಲ. ಪ್ರಸ್ತಾವನೆಗಳನ್ನು ಸಾಕಾರಗೊಳಿಸಿ, ಭರವಸೆಗಳನ್ನು ಈಡೇರಿಸುವವರೆಗೆ ನಾವು ಜೊತೆಗಿರುತ್ತೇವೆ.
ವಿಶ್ವದ ನಕ್ಷೆಯಲ್ಲಿ ಮಾಹಿತಿ ತಂತ್ರಜ್ಞಾನದ ಕಕ್ಷೆಯಲ್ಲಿ ಬೆಂಗಳೂರು ಪ್ರಜ್ವಲಿಸುತ್ತಿರುವುದು ನಿಜ. ಆದರೆ, ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯದ ರಾಜಧಾನಿ ಮಾತ್ರವಲ್ಲ, ಇಡೀ ಕರ್ನಾಟಕವೇ ಬೆಳೆಯಬೇಕು ಎಂಬುದು ನಮ್ಮ ಅಪೇಕ್ಷೆ. ಕರ್ನಾಟಕವು ಬೆಳಗಲಿದೆ ಎಂಬುದು ನಮ್ಮ ನಿರೀಕ್ಷೆ.
ಅನಿವಾಸಿ ಭಾರತೀಯ ದಿವಸ್‍ನ ಶ್ರೇಯಸ್ಸು ಹಾಗೂ ಯಶಸ್ಸು ಕರ್ನಾಟಕದ ಮಹಾಜನತೆಗೆ ದೊರೆಯಲಿ ಎಂಬ ಭರವಸೆಯ ಆಶಯದೊಂದಿಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಶುಭ ಕೋರುತ್ತೇನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s