ಜನತಾ ಚಿತ್ರಮಂದಿರಗಳಿಗೆ ಪ್ರೋತ್ಸಾಹಧನ

ಕನ್ನಡ ಚಲನಚಿತ್ರರಂಗದ ಬಹುದಿನಗಳ ಬೇಡಿಕೆಯಾಗಿದ್ದ ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

2016-17 ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ರೂಪುರೇಷೆ-ಮಾನದಂಡ ಅಳವಡಿಸಿಕೊಂಡು ಮಾರ್ಗಸೂಚಿಗಳನ್ನು ನಿಗಧಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಯಾವುದೇ ಭಾಗದಲ್ಲಿ ನಿರ್ಮಾಣವಾಗುವ ಕನಿಷ್ಟ 200 ಆಸನಗಳುಳ್ಳ ಏಕ ಪರದೆ ಅಥವಾ ಕನಿಷ್ಟ 150 ಆಸನಗಳುಳ್ಳ ಬಹುಪರದೆ ಚಿತ್ರಮಂದಿರಗಳು ಜನತಾ ಚಿತ್ರಮಂದಿರ ಯೋಜನೆಯಡಿ ಪ್ರೋತ್ಸಾಹಧನಕ್ಕೆ ಅರ್ಹತೆ ಹೊಂದುತ್ತವೆ.

ಹೊಸದಾಗಿ ನಿರ್ಮಾಣವಾಗುವ ಏಕಪರದೆ ಚಿತ್ರ ಮಂದಿರಗಳಿಗೆ 50.00 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಹೊಸದಾಗಿ ನಿರ್ಮಾಣವಾಗುವ ಬಹುಪರದೆ ಚಿತ್ರಮಂದಿರಗಳಿಗೂ ಸಹ ಪ್ರತಿ ಪರದೆಗೆ ಗರಿಷ್ಠ 50.00 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಗರಿಷ್ಠ ಎರಡು ಪರದೆಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು.

ಈಗಾಗಲೇ ಚಾಲ್ತಿಯಲ್ಲಿರುವ ಏಕಪರದೆ ಚಿತ್ರಮಂದಿರವನ್ನು ಬಹುಪರದೆ ಚಿತ್ರ ಮಂದಿರವನ್ನಾಗಿ ಮಾರ್ಪಡಿಸಿದಲ್ಲಿ ಮೂಲ ಪರದೆ ಹೊರತುಪಡಿಸಿ ಹೊಸದಾಗಿ ನಿರ್ಮಾಣವಾಗುವ ಪ್ರತಿ ಪರದೆಗೂ ಗರಿಷ್ಟ 25.00 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.

1. ಜನತಾ ಚಿತ್ರಮಂದಿರವನ್ನು ಹೊಸದಾಗಿ ನಿರ್ಮಿಸಲು ಇಚ್ಛಿಸುವವರು ಅಥವಾ ಹಾಲಿ ಚಿತ್ರಮಂದಿರವನ್ನು ಜನತಾ ಚಿತ್ರಮಂದಿರವಾಗಿ ಪರಿವರ್ತಿಸಲು ಇಚ್ಛಿಸುವವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರ ಕಛೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

2. ರಾಜ್ಯದ ಯಾವುದೇ ಭಾಗದಲ್ಲಿ ಕನಿಷ್ಟ 200 ಆಸನಗಳುಳ್ಳ , ಏಕಪರದೆಯ ಅಥವಾ ಕನಿಷ್ಟ 150 ಆಸನಗಳನ್ನು ಒಳಗೊಂಡ ಬಹುಪರದೆಯ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒಳಗೊಂಡ ಚಿತ್ರಮಂದಿರಗಳನ್ನು ನಿರ್ಮಿಸಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ನಿರಪೇಕ್ಷೇಪಣಾ ಪತ್ರವನ್ನು ಪಡೆದು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನಕ್ಕೆ ಮುಕ್ತಗೊಳಿಸಿದ ಚಿತ್ರಮಂದಿರಗಳು ಪ್ರೋತ್ಸಾಹಧನಕ್ಕೆ ಅರ್ಹತೆ ಹೊಂದುತ್ತವೆ.
3. ಚಿತ್ರಮಂದಿರವನ್ನು ಸ್ವಂತ ನಿವೇಶನದಲ್ಲಿ ನಿರ್ಮಿಸಬಹುದು ಅಥವಾ ಗುತ್ತಿಗೆ ಆಧಾರದ ಮೇಲೆ ಜಮೀನನ್ನು ಪಡೆದು ನಿರ್ಮಿಸಬಹುದು. ಸ್ವಂತ ಒಡೆತನದಲ್ಲಿ ಅಥವಾ ಪಾಲುದಾರಿಕೆಯಲ್ಲಿ ನಿರ್ಮಿಸಬಹುದು. ಸರ್ಕಾರಿ ಒಡೆತನದ ಸಂಸ್ಥೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಬಹುದು.

4.ಜನತಾ ಚಿತ್ರಮಂದಿರವನ್ನು ಹೊಸದಾಗಿ ನಿರ್ಮಿಸಿರಬೇಕು. ಇದಕ್ಕೆ ಪೂರಕವಾಗಿ ಅಳವಡಿಸುವ ತಾಂತ್ರಿಕ ಪರಿಕರಗಳು, ಪೀಠೋಪಕರಣಗಳು ಹಾಗೂ ಇತರೆ ಸಲಕರಣೆಗಳನ್ನು ಅಧಿಕೃತ ಮಾರಾಟಗಾರರಿಂದ ಹೊಸದಾಗಿ ಪಡೆದು ಅಳವಡಿಸಿರಬೇಕು.

5. ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ ಪ್ರೋತ್ಸಾಹಧನ ಪಡೆದ ಚಿತ್ರಮಂದಿರಗಳಲ್ಲಿ, ಪ್ರೋತ್ಸಾಹಧನ ಪಡೆದ ದಿನದಿಂದ ಶೇಕಡ 100 ರಷ್ಟು ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು.

6. ಸರ್ಕಾರದಿಂದ ಪ್ರೋತ್ಸಾಹಧನ ಪಡೆದ ಜನತಾ ಚಿತ್ರಮಂದಿರಗಳು ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸದೇ ಇದ್ದಲ್ಲಿ ಸರ್ಕಾರವು ಮಂಜೂರು ಮಾಡಿದ ಪ್ರೋತ್ಸಾಹಧನವನ್ನು ದಂಡಶುಲ್ಕದೊಂದಿಗೆ ಸರ್ಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ಪತ್ರವನ್ನು ರೂ 100 ಮೌಲ್ಯದ ಛಾಪಾಕಾಗದದಲ್ಲಿ ಚಿತ್ರಮಂದಿರದ ಮಾಲೀಕರು ಸಲ್ಲಿಸಬೇಕು.

7. ಸರ್ಕಾರದ ಪ್ರೋತ್ಸಾಹಧನ ಪಡೆದು ನಿರ್ಮಿಸಿದ ಚಿತ್ರಮಂದಿರವನ್ನು ಕನ್ನಡ ಚಲನಚಿತ್ರ ಪ್ರದರ್ಶನ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ.

8. ಜನತಾ ಚಿತ್ರಮಂದಿರ ನಿರ್ಮಾಣದ ನಂತರ ಪ್ರೋತ್ಸಾಹಧನ ಪಡೆದ ಮಾಲೀಕರು ನಿವೇಶನ / ಜಮೀನನ್ನು ಅಥವಾ ಚಿತ್ರಮಂದಿರವನ್ನು ಬೇರೆಯವರಿಗೆ ಮಾರಾಟ / ವರ್ಗಾವಣೆ / ಪರಭಾರೆ ಮಾಡಿದಲ್ಲಿ ಖರೀದಿದಾರರು ಸಹ ಸದರಿ ಜನತಾ ಚಿತ್ರಮಂದಿರವನ್ನು ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಮಾತ್ರ ಮೀಸಲಿಡಬೇಕಾಗುತ್ತದೆ.

9. ಸರ್ಕಾರದ ಆದೇಶದ ದಿನಾಂಕದಿಂದ ಹಿಂದಿನ ದಿನಾಂಕಗಳಲ್ಲಿ ನಿರ್ಮಿಸಿದ ಚಿತ್ರಮಂದಿರಗಳಿಗೆ ಈ ಪ್ರೋತ್ಸಾಹಧನ ಯೋಜನೆ ಅನ್ವಯಿಸುವುದಿಲ್ಲ. ಒಂದು ಚಿತ್ರಮಂದಿರಕ್ಕೆ ಒಂದು ಬಾರಿ ಮಾತ್ರ ಸಹಾಯಧನ ಮಂಜೂರು ಮಾಡಲಾಗುವುದು.

10. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾ ನಿರ್ದೇಶಕರು ರಚಿಸುವ ಪರಿಶೀಲನಾ ತಂಡದ ಶಿಫಾರಸ್ಸು ಆಧರಿಸಿ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುವುದು.
11. ಚಲನಚಿತ್ರ ನಿರ್ಮಾಣ/ವಿತರಣೆ/ಪ್ರದರ್ಶನ ಕ್ಷೇತ್ರದಲ್ಲಿ ಅನುಭವ ಹೊಂದಿದವರಿಗೆ ಹಾಗೂ ಚಿತ್ರಮಂದಿರ/ಜನತಾ ಚಿತ್ರಮಂದಿರ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಆದ್ಯತೆ ನೀಡಲಾಗುವುದು.

12. ಸದೃಢ ಹಣಕಾಸಿನ ಸ್ಥಿತಿಗತಿ ಹಾಗೂ ಹಿನ್ನೆಲೆ ಹೊಂದಿರುವ ಕಂಪನಿ ಅಥವಾ ಪ್ರವರ್ತಕರಿಗೆ ಆದ್ಯತೆ ನೀಡಲಾಗುವುದು.

13. ಈ ಚಿತ್ರಮಂದಿರಗಳನ್ನು ಸ್ಥಳೀಯ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಯ ಕೇಂದ್ರವೆಂದು ಪರಿಗಣಿಸಲಾಗುವುದು. ಬಹು ಉದ್ದೇಶಿತ ಸೌಕರ್ಯಗಳನ್ನು ಹೊಂದಿರುವ ಚಿತ್ರಮಂದಿರಗಳನ್ನು ನಿರ್ಮಿಸುವವರಿಗೆ ಆದ್ಯತೆ ನೀಡಲಾಗುವುದು.

14. ಚಿತ್ರಮಂದಿರವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿದವರಿಗೆ ( 90 ರಿಂದ 120 ದಿನಗಳು) ಆದ್ಯತೆ ನೀಡಲಾಗುವುದು.

15. ಚಿತ್ರಮಂದಿರಗಳನ್ನು ಪಾರದರ್ಶಕವಾಗಿ ಹಾಗೂ ದಕ್ಷತೆಯಿಂದ ನಿರ್ವಹಿಸುವ ಸಾಮರ್ಥ್ಯವನ್ನು ಅರ್ಜಿದಾರರು ಹೊಂದಿರಬೇಕು. ಮಿತವ್ಯಯಕಾರಿ ಬಾಕ್ಸ್ ಆಫೀಸ್ ಟಿಕೆಟಿಂಗ್, ಆನ್ ಲೈನ್ ಟಿಕೆಟ್ ಮತ್ತು ಗಳಿಕೆಯ ಸ್ವಯಂ ಚಾಲಿತ ವರದಿ ಹಾಗೂ ತೆರಿಗೆ ಸಂದಾಯ ವ್ಯವಸ್ಥೆ ರೂಪಿಸುವುದು ಆಪೇಕ್ಷಣಿಯ.

ಚಿತ್ರರಂಗದ ಆಸಕ್ತರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s